ADVERTISEMENT

ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ ‘ಆಸ್ಟ್ರೊಸ್ಯಾಟ್‌’ಗೆ ದಶಕದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 14:45 IST
Last Updated 2 ಅಕ್ಟೋಬರ್ 2025, 14:45 IST
ಆಸ್ಟ್ರೋಸ್ಯಾಟ್‌ ಕಣ್ಣಿಗೆ ಗೋಚರಿಸಿದ 10 ಕೋಟಿ ಜ್ಯೋರ್ತಿವರ್ಷಗಳಷ್ಟು ದೂರದ ಸುರುಳಿಯಾಕಾರದ ನಕ್ಷತ್ರಪುಂಜ
ಆಸ್ಟ್ರೋಸ್ಯಾಟ್‌ ಕಣ್ಣಿಗೆ ಗೋಚರಿಸಿದ 10 ಕೋಟಿ ಜ್ಯೋರ್ತಿವರ್ಷಗಳಷ್ಟು ದೂರದ ಸುರುಳಿಯಾಕಾರದ ನಕ್ಷತ್ರಪುಂಜ    

ಬೆಂಗಳೂರು: ಭಾರತದ ಮೊದಲ ಖಗೋಳ ವೀಕ್ಷಣಾ ಉಪಗ್ರಹ ‘ಆಸ್ಟ್ರೊಸ್ಯಾಟ್‌’ಗೆ ದಶಕದ ಸಂಭ್ರಮ. 2015ರ ಸೆಪ್ಟೆಂಬರ್‌ 28ರಂದು ಉಡಾವಣೆಗೊಂಡ ಈ ಉಪಗ್ರಹಕ್ಕೆ ಇದೇ 28ರಂದು 10 ವರ್ಷ ತುಂಬಿದ್ದು, ಇನ್ನೂ ಕಾರ್ಯ ನಿರ್ವಹಿಸುತ್ತಿದೆ.

ಆಸ್ಟ್ರೊಸ್ಯಾಟ್‌ ಈವರೆಗೆ ಬಾಹ್ಯಾಕಾಶದಲ್ಲಿ ಹಲವು ವಿನೂತನ ವಿದ್ಯಮಾನಗಳನ್ನು ಪತ್ತೆ ಮಾಡಿದೆ. ಮುಖ್ಯವಾಗಿ ಕೆಂಪು ದೈತ್ಯ ನಕ್ಷತ್ರದ ನಿಗೂಢವನ್ನು ಭೇದಿಸಿದೆ. ಅತ್ಯಂತ ವೇಗವಾಗಿ ತಿರುಗುವ ಕಪ್ಪುಕುಳಿಗಳು ಮತ್ತು ಕ್ಷೀರಪಥದಲ್ಲಿನ ಅವಳಿ ನಕ್ಷತ್ರಗಳು ಹೊರಸೂಸುವ ಕ್ಷ–ಕಿರಣಗಳ ಕುರಿತು ಹಲವು ಕುತೂಹಲಕಾರಿ ಅಂಶಗಳು ಬ್ರಹ್ಮಾಂಡದ ಕುರಿತ ಹೆಚ್ಚಿನ ಅಧ್ಯಯನಕ್ಕೆ ನೆರವಾಗಿದೆ ಎಂದು ಇಸ್ರೊ ತಿಳಿಸಿದೆ.

ನೇರಳಾತೀತ (ಅಲ್ಟ್ರಾವಯೊಲೇಟ್‌) ವಿಶಾಲ ಶಕ್ತಿ ಶ್ರೇಣಿಯ ಮೂಲಕ ಮತ್ತು ಅಧಿಕ ಶಕ್ತಿಯ ಕ್ಷ–ಕಿರಣಗಳನ್ನು ಬಳಸಿ ಬ್ರಹ್ಮಾಂಡದಲ್ಲಿ ನಡೆಯುವ ಅನೂಹ್ಯ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಆಸ್ಟ್ರೊಸ್ಯಾಟ್‌ ಹೊಂದಿದೆ. ಇದು ತನ್ನ ಮೊದಲ ವೈಜ್ಞಾನಿಕ ಯಾನವನ್ನು ಎರಡು ದಶಕಗಳಷ್ಟು ಹಳೆಯ ಒಗಟನ್ನು ಬಿಡಿಸುವ ಮೂಲಕ ಆರಂಭಿಸಿತು. ಅದೇನೆಂದರೆ, ಕೆಂಪು ದೈತ್ಯ ನಕ್ಷತ್ರವೊಂದು ಅಸಾಮಾನ್ಯ ಎಂಬಂತೆ ಪ್ರಖರವಾಗಿ ನೇರಳಾತೀತ ಬೆಳಕು ಮತ್ತು ಅತಿಗೆಂಪು (ಇನ್ಫ್ರಾರೆಡ್‌) ಬೆಳಕನ್ನು ಹೊರಸೂಸುತ್ತಿತ್ತು. ಅದಕ್ಕೆ ಕಾರಣಗಳನ್ನು ಪತ್ತೆ ಹಚ್ಚುವಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಆ ಬಳಿಕ 9 ಬಿಲಿಯನ್‌ ಜ್ಯೋರ್ತಿವರ್ಷಗಳಷ್ಟು ದೂರದ ಅಲ್ಟ್ರಾವಯೊಲೇಟ್‌ ಫೋಟಾನ್‌ ಅನ್ನು ಪತ್ತೆ ಮಾಡಿತ್ತು. ಚಿಟ್ಟೆ ಆಕಾರದ ನೀಹಾರಿಕೆ ಹಿಂದಿಗಿಂತ ಮೂರು ಪಟ್ಟು ವಿಸ್ತಾರಗೊಳ್ಳುತ್ತಾ ಹೊರಹೊಮ್ಮುವುದನ್ನೂ ಪತ್ತೆ ಮಾಡಿತ್ತು.

ADVERTISEMENT

ಆಸ್ಟ್ರೋಸ್ಯಾಟ್‌ಗಾಗಿ ಇಸ್ರೊ ಜತೆಗೆ ಭಾರತದ ಹಲವು ವಿಜ್ಞಾನ ಸಂಸ್ಥೆಗಳು ಕೈಜೋಡಿಸಿವೆ. ಕೆನಡಾ ಮತ್ತು ಬ್ರಿಟನ್‌ ವಿಶ್ವವಿದ್ಯಾಲಯಗಳು ಹಾಗೂ ಬಾಹ್ಯಾಕಾಶ ಸಂಸ್ಥೆಗಳ ಸಹಭಾಗಿತ್ವ ಇದೆ. 57 ದೇಶಗಳ ಸುಮಾರು 3,400 ಸಂಸ್ಥೆಗಳು ಈ ಉಪಗ್ರಹದ ಮಾಹಿತಿಯನ್ನು ಬಳಸಿಕೊಳ್ಳುತ್ತಿವೆ. ಅಮೆರಿಕ, ಅಘ್ಗಾನಿಸ್ತಾನ ಮತ್ತು ಅಂಗೋಲಗಳೂ ಮಾಹಿತಿ ಪಡೆದುಕೊಳ್ಳುವ ದೇಶಗಳ ಪಟ್ಟಿಯಲ್ಲಿ ಸೇರಿವೆ ಎಂದು ಇಸ್ರೊ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.