ADVERTISEMENT

ಗಡಿನಾಡಿಗೆ ಪ್ರತ್ಯೇಕ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಿ: ಸಾಹಿತಿ ಬರಗೂರು

ಸಾಹಿತಿ ಬರಗೂರು ರಾಮಚಂದ್ರಪ್ಪ ಸರ್ಕಾರಕ್ಕೆ ಆಗ್ರಹ * ಅಶೋಕ ಚಂದರಗಿಗೆ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 20:49 IST
Last Updated 18 ಜೂನ್ 2025, 20:49 IST
ಕಾರ್ಯಕ್ರಮದಲ್ಲಿ ಅಶೋಕ ಚಂದರಗಿ ಅವರಿಗೆ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬರಗೂರು ರಾಮಚಂದ್ರಪ್ಪ, ಸಿ.ಕೆ. ರಾಮೇಗೌಡ, ಪರುಷೋತ್ತಮ ಬಿಳಿಮಲೆ, ಚಂಪಾ ಅವರ ಪುತ್ರಿ ಮೀನಾ ಪಾಟೀಲ ಹಾಗೂ ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಶಂಕರ್ ಹೂಗಾರ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಅಶೋಕ ಚಂದರಗಿ ಅವರಿಗೆ ‘ಚಂಪಾ ಸಿರಿಗನ್ನಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬರಗೂರು ರಾಮಚಂದ್ರಪ್ಪ, ಸಿ.ಕೆ. ರಾಮೇಗೌಡ, ಪರುಷೋತ್ತಮ ಬಿಳಿಮಲೆ, ಚಂಪಾ ಅವರ ಪುತ್ರಿ ಮೀನಾ ಪಾಟೀಲ ಹಾಗೂ ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಶಂಕರ್ ಹೂಗಾರ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಗಡಿನಾಡಿನಲ್ಲಿ ಕನ್ನಡ ಪರ ವಾತಾವರಣ ನಿರ್ಮಾಣವಾಗಲು ಆ ಭಾಗದಲ್ಲಿ ಪ್ರತ್ಯೇಕ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಆಗ್ರಹಿಸಿದರು. 

ಕರ್ನಾಟಕ ಸ್ವಾಭಿಮಾನಿ ವೇದಿಕೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ಅವರಿಗೆ ‘ಚಂಪಾ ಸಿರಿಗನ್ನಡ’ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು. ಈ ಪ್ರಶಸ್ತಿಯು ₹ 10 ಸಾವಿರ ನಗದು ಒಳಗೊಂಡಿದೆ. 

‘ಗಡಿನಾಡನ್ನು ನೂರೆಂಟು ಸಮಸ್ಯೆಗಳು ಕಾಡುತ್ತಿವೆ. ಭೌಗೋಳಿಕ ವಿವಾದ ಅಲ್ಲಿ ಸದಾ ಜೀವಂತವಾಗಿ ಇರುತ್ತದೆ. ಈ ವಿವಾದವನ್ನು ಭಾವನಾತ್ಮಕ ವಿವಾದವಾಗಿ ಮರಾಠಿಗರು ರೂಪಾಂತರಿಸುತ್ತಾ ಬಂದಿದ್ದಾರೆ. ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆ ಉಳಿಸಿಕೊಳ್ಳಬೇಕು. ಈ ಪ್ರದೇಶದಲ್ಲಿ ಕನ್ನಡ ಪರ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಬೇಕು. ಶಿಕ್ಷಣದ ಮೂಲಕ ಕನ್ನಡವನ್ನು ನೆಲೆಯೂರಿಸಬೇಕು. ಗಡಿ ಭಾಗದಲ್ಲಿರುವ ಹಾಗೂ ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳನ್ನು ಕೇಂದ್ರೀಕರಿಸಿ, ಪ್ರತ್ಯೇಕ ಶಿಕ್ಷಣ ನಿರ್ದೇಶನಾಲಯವನ್ನು ಸರ್ಕಾರ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಪ್ರತ್ಯೇಕ ನಿರ್ದೇಶಕರು, ಸಿಬ್ಬಂದಿ ಇರುವಂತೆ ಗಡಿ ಪ್ರದೇಶಕ್ಕೂ ಪ್ರತ್ಯೇಕ ನಿರ್ದೇಶಕರು ಹಾಗೂ ಸಿಬ್ಬಂದಿ ಒದಗಿಸಬೇಕು. ಅಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಪದವಿಪೂರ್ವ ಶಿಕ್ಷಣ ಕೇಂದ್ರೀಕರಿಸುವಂತೆ ನೋಡಿಕೊಳ್ಳಬೇಕು’ ಎಂದರು. 

‘ನೇರ, ನಿಷ್ಠುರವಾಗಿ ಮಾತನಾಡುತ್ತಿದ್ದ ಚಂಪಾ (ಚಂದ್ರಶೇಖರ ಪಾಟೀಲ) ಅವರು ಇವತ್ತಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಸ್ಥಾಪಿಸುವುದಕ್ಕೆ ಅವರು ಶಕ್ತಿಯಾಗಿದ್ದರು’ ಎಂದು ಸ್ಮರಿಸಿಕೊಂಡರು. 

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ‘ಚಂಪಾ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪರಿಷತ್ತಿಗೆ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಿದ್ದರು. ಅವರ ಅವಧಿಯಲ್ಲಿ ಕಸಾಪ ಕನ್ನಡಿಗರ ಪರಿಷತ್ತಾಗಿ ಮಾರ್ಪಟ್ಟಿತ್ತು. ಕನ್ನಡ ಪರ ಚಳವಳಿಗಳ ರೂಪುರೇಷೆಗಳನ್ನು ಪರಿಷತ್ತಿನ ಆವರಣದಲ್ಲಿಯೇ ಸಿದ್ಧಪಡಿಸಲಾಗುತ್ತಿತ್ತು’ ಎಂದು ಹೇಳಿದರು.

‘ಪರಿಷತ್ತಿನ ಹಾಲಿ ಅಧ್ಯಕ್ಷರು ಪರಪ್ಪನ ಅಗ್ರಹಾರದ ರೀತಿ ಪರಿಷತ್ತಿನ ಕಟ್ಟಡದ ಕಾಂಪೌಂಡ್‌ ಎತ್ತರಿಸಿದ್ದಾರೆ. ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದ್ದು, ಅನುಮತಿ ಪಡೆದು ಅಧ್ಯಕ್ಷರ ಭೇಟಿ ಮಾಡಬೇಕಾದ ಪರಿಸ್ಥಿತಿಯಿದೆ. ಹಣಕಾಸಿಗೆ ಸಂಬಂಧಿಸಿದಂತೆ ಪರಿಷತ್ತಿನಲ್ಲಿ ಅನೇಕ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.