ADVERTISEMENT

ಅರಿಯಿರಿ, ಅಂಜಿಕೆ ಬಿಡಿ: ಕೋವಿಡ್ ದೃಢಪಟ್ಟು ಗುಣಮುಖವಾದ ಯುವತಿಯ ಅನುಭವದ ಮಾತುಗಳು

ಎಂ.ಮಹೇಶ
Published 19 ಜುಲೈ 2020, 19:30 IST
Last Updated 19 ಜುಲೈ 2020, 19:30 IST
ವಿಭಾ ಎಂ.ವಿ.
ವಿಭಾ ಎಂ.ವಿ.   

ಬೆಳಗಾವಿ: ಕೊರೊನಾ ಸೋಂಕಿನ ಬಗ್ಗೆ ಎಲ್ಲರಿಗೂ ತಿಳಿವಳಿಕೆ ಅಗತ್ಯ. ಆದರೆ, ಯಾವುದೇ ಕಾರಣಕ್ಕೂ ಅಂಜಿಕೆ ಪಡಬಾರದು. ಮಾನಸಿಕವಾಗಿ ಕುಗ್ಗಬಾರದು. ಧೈರ್ಯವೊಂದೇ ಮಂತ್ರವಾಗಬೇಕು.

– ಕೋವಿಡ್–19 ದೃಢಪಟ್ಟು ಗುಣಮುಖವಾಗಿ, ಹೋಂ ಐಸೊಲೇಷನ್‌ ಅವಧಿಯನ್ನೂ ಸಂಪೂರ್ಣ ಮಾಡಿರುವ ನಗರದ ಎಂಜಿನಿಯರಿಂಗ್‌ ಯುವತಿ ವಿಭಾ ಎಂ.ವಿ. ಅವರ ಅನುಭವದ ಮಾತುಗಳಿವು.

‘ಎಂಜಿನಿಯರಿಂಗ್‌ ಕೊನೆಯ ವರ್ಷದ ಪ್ರಾಜೆ‌ಕ್ಟ್‌ಗಾಗಿ ಅಹಮದಾಬಾದ್‌ ಇಸ್ರೊಗೆ ಹೋಗಿದ್ದೆ. ಮೇ 15ರಂದು ಪ್ರಾಜೆಕ್ಟ್‌ ಕೆಲಸ ಮುಗಿದಿತ್ತು. ಜೂನ್‌ 17ರಂದು ವಿಮಾನದಲ್ಲಿ ಬಂದಿದ್ದೆ. ಆಗ ನನಗೆ ಕೊರೊನಾ ಲಕ್ಷಣಗಳಿರಲಿಲ್ಲ. ಆದರೆ, ಮುಂಜಾಗ್ರತಾ ಕ್ರಮವಾಗಿ ಹಾಗೂ ಸರ್ಕಾರದ ಸೂಚನೆಯಂತೆ ಏಳು ದಿನಗಳವರೆಗೆ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದೆ. ಆಗ ಲೀಟರ್‌ ನೀರಿಗೆ ಅರ್ಧ ಚಮಚದಷ್ಟು ಅಮೃತಬಳ್ಳಿಯ ಪೌಡರ್‌ ಬೆರೆಸಿದ ನೀರು ಕುಡಿಯುತ್ತಿದ್ದೆ. ಇದು ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ನೆರವಾಯಿತು. ಏಳು ದಿನಗಳ ನಂತರ ಗಂಟಲು ದ್ರವದ ಮಾದರಿ ಕೊಟ್ಟಿದ್ದೆ. ಪಾಸಿಟಿವ್ ಬಂದಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ’.

ADVERTISEMENT

‘ಆಸ್ಪತ್ರೆಯಲ್ಲಿನ ವೈದ್ಯಕೀಯ ಚೆನ್ನಾಗಿ ಕಾಳಜಿಯಿಂದ ನೋಡಿಕೊಂಡರು. ನರ್ಸ್‌ಗಳು 2 ತಾಸಿಗೊಮ್ಮೆ ಬಂದು ಪರಿಶೀಲಿಸುತ್ತಿದ್ದರು. ವೈದ್ಯರು ನಿತ್ಯ 2 ರೌಂಡ್ಸ್‌ ಬಂದು ಸಲಹೆ ನೀಡುತ್ತಿದ್ದರು. ಒಳ್ಳೆಯ ಊಟ ಕೊಡುತ್ತಿದ್ದರು. ಎರಡು ದಿನಗಳ ನಂತರ ನಾನು ಮನೆಯಿಂದ ಊಟ ತರಿಸಿಕೊಳ್ಳುವುದಕ್ಕೂ ಅವಕಾಶ ದೊರೆಯಿತು. ವಿಟಮಿನ್‌–ಸಿ, ಜಿಂಕ್‌, ಆಂಟಿಬಯೊಟೆಕ್‌ ಮಾತ್ರೆಗಳನ್ನು ಕೊಡುತ್ತಿದ್ದರು. 10 ದಿನಗಳವರೆಗೆ ಆಸ್ಪತ್ರೆಯಲ್ಲಿದ್ದೆ. ಪರೀಕ್ಷೆಗಾಗಿ ನಿತ್ಯವೂ ರಕ್ತ ಸಂಗ್ರಹಿಸುತ್ತಿದ್ದರು. ವೈದ್ಯರ ಸಲಹೆಗಳನ್ನು ಪಾಲಿಸುತ್ತಿದ್ದೆ. ನೆಗೆಟಿವ್ ವರದಿ ಬಂದ ನಂತರ ನನ್ನನ್ನು ಬಿಡುಗಡೆ ಮಾಡಿದರು. ಆಗಲೂ ಲವಲವಿಕೆಯಿಂದಲೇ ಇದ್ದೆ’ ಎಂದು ಹಂಚಿಕೊಂಡರು.

‘ಆಸ್ಪತ್ರೆಯಿಂದ ಬಂದ ಮೇಲೆ ಮನೆಯಲ್ಲಿ 14 ದಿನಗಳವರೆಗೆ ಪ್ರತ್ಯೇಕವಾಗಿದ್ದೆ. ಆಯುಷ್‌ ಇಲಾಖೆಯವರು ಬಿಡುಗಡೆ ಮಾಡಿರುವ ಕಷಾಯದ ಪೌಡರ್ ಬೆರೆಸಿದ ನೀರು ಕುಡಿಯುತ್ತಿದ್ದೇನೆ. ಮನೆಯವರು ಹಾಗೂ ಏರಿಯಾದವರೆಲ್ಲರಿಗೂ ನೆಗೆಟಿವ್ ವರದಿ ಬಂದಿದೆ. ಕೊರೊನಾ ಎಂದಾಕ್ಷಣ ಭಯಪಡುವುದರಿಂದ ಆರೋಗ್ಯ ಹಾಳಾಗುತ್ತದೆ. ಧೈರ್ಯದಿಂದ ಅದನ್ನು ಎದುರಿಸಬೇಕು’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.