ADVERTISEMENT

ಬಿಇಗೆ ಪ್ರವೇಶ ಪಡೆದಿದ್ದರೆ ‘ಆಯುಷ್‌’ ಬಂದ್

ವಿದ್ಯಾರ್ಥಿಗಳಲ್ಲಿ ಆತಂಕ: ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 20:15 IST
Last Updated 17 ಆಗಸ್ಟ್ 2019, 20:15 IST
   

ಬೆಂಗಳೂರು: ಆಯುಷ್‌ ಕೋರ್ಸ್‌ಗಳ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ, ಈಗಾಗಲೇ ಎಂಜಿನಿಯರಿಂಗ್‌ ಕೋರ್ಸ್‌ಗೆ ಪ್ರವೇಶ ಪಡೆದವರಿಗೆ ಭಾಗವಹಿಸುವ ಅರ್ಹತೆ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ. ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಇದರಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ.

ಯುಜಿ–ನೀಟ್‌ 2019ರ ಆಧರಿಸಿ ಆಯುಷ್‌ ಕೋರ್ಸ್‌ಗಳಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕೆಇಎ ಆ.19 ರಿಂದ ಪ್ರಾರಂಭಿಸಲಿದೆ.

ವೈದ್ಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲಾಗದೇ ಎಂಜಿನಿಯರಿಂಗ್‌ ಪ್ರವೇಶ ಪಡೆದಿರುವವರಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಆಯುಷ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಬಯಸಿದ್ದರು. ಪ್ರಾಧಿಕಾರದ ಹೊಸ ನಿರ್ದೇಶನದಿಂದ ವಿದ್ಯಾರ್ಥಿಗಳು ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದಾರೆ.

ADVERTISEMENT

‘ಕೆಇಎ ಕ್ರಮದಿಂದ ಅನ್ಯಾಯ ಆಗುತ್ತಿದೆ. ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಇದನ್ನು ಹೇಳಿದ್ದರೆ, ಕೇವಲ ಆಯುಷ್‌ ಕೋರ್ಸ್‌ಗೆ ಪ್ರಯತ್ನಿಸುತ್ತಿದ್ದೆವು’ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಕಳೆದ ವರ್ಷ ಆಯುಷ್‌ ಕೋರ್ಸ್‌ಗಳ ಆಯ್ಕೆಗೆ ಅವಕಾಶವಿತ್ತು. ಎಂಜಿನಿಯರಿಂಗ್‌, ದಂತ ವೈದ್ಯಕೀಯ ಕೋರ್ಸ್‌ಗೆ ದಾಖಲಾಗಿ ಶುಲ್ಕ ಕಟ್ಟಿದ್ದರೂ, ಬಳಿಕ ಆಯುಷ್‌ಗೆ ಪ್ರವೇಶ ಪಡೆದರೆ, ಶುಲ್ಕ ವರ್ಗಾಯಿಸುತ್ತಿದ್ದರು. ಈಗ ಅವಕಾಶವಿಲ್ಲ’ ಎಂದು ವಿದ್ಯಾರ್ಥಿ ಸಂತೋಷ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.