ADVERTISEMENT

ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್‌ ಕಡ್ಡಾಯ

ಗೊಂದಲದಿಂದ ಭರ್ತಿಯಾಗದ 299 ಸೀಟುಗಳು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 18:32 IST
Last Updated 16 ಡಿಸೆಂಬರ್ 2018, 18:32 IST

ಬೆಂಗಳೂರು: ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್‌ ಪರೀಕ್ಷೆ ಕಡ್ಡಾಯವೊ ಅಲ್ಲವೊ ಎಂಬ ಗೊಂದಲದ ಕಾರಣ 2018–19 ಸಾಲಿನಲ್ಲಿ ಸರ್ಕಾರಿ ಮತ್ತು ಮ್ಯಾನೇಜ್‌ಮೆಂಟ್‌ ಕೋಟದಡಿ 299 ಸೀಟುಗಳನ್ನು ಭರ್ತಿ ಮಾಡಿಲ್ಲ.

‘ನೀಟ್‌(ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಕಡ್ಡಾಯದ ಬಗ್ಗೆ ಗೊಂದಲ ಇದ್ದ ಕಾರಣ ಅಷ್ಟು ಸೀಟುಗಳು ಖಾಲಿ ಉಳಿದಿವೆ’ ಎಂದು ಆಯುಷ್‌ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಈಗ ಎಚ್ಚೆತ್ತುಕೊಂಡಿರುವ ಆಯುಷ್‌ ಇಲಾಖೆ ಮುಂದಿನ ಶೈಕ್ಷಣಿಕ ವರ್ಷ ಆಯುಷ್‌ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್ ಉತ್ತೀರ್ಣರಾಗುವುದು ಕಡ್ಡಾಯ ಎಂದೂ ಅಧಿಸೂಚನೆ ಹೊರಡಿಸಿದೆ.

ADVERTISEMENT

ಆಯುರ್ವೇದ, ಯುನಾನಿ, ಹೊಮಿಯೊಪತಿ, ನ್ಯಾಚುರೊಪತಿ ಮತ್ತು ಯೋಗ ಕೋರ್ಸ್‌ಗಳಿಗೆ ಈಗ ವ್ಯಾಪಕ ಬೇಡಿಕೆ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಅಧಿಸೂಚನೆಯಲ್ಲೂ ಆಯುಷ್‌ ಕೋರ್ಸ್‌ ಪ್ರವೇಶಕ್ಕೆ ನೀಟ್‌ ಕಡ್ಡಾಯ ಎಂದು ತಿಳಿಸಿತ್ತು. ಆದರೆ, ಆಯುಷ್‌ ಇಲಾಖೆಗೆ ಯಾವ ವರ್ಷದಿಂದ ಅನ್ವಯ ಆಗುತ್ತದೆ ಎಂಬ ಬಗ್ಗೆ ಇದ್ದ ಗೊಂದಲ ನಿವಾರಣೆ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಒಟ್ಟು 2596 ಸೀಟುಗಳಲ್ಲಿ ನ್ಯಾಚುರೊಪತಿ, ಯೋಗ ಕೋರ್ಸ್‌ಗಳಲ್ಲಿ 141, ಹೊಮಿಯೊಪತಿ 74 ಮತ್ತು ಆಯುರ್ವೇದದಲ್ಲಿ 72 ಸೀಟುಗಳು ಖಾಲಿ ಉಳಿದಿವೆ. ಈ ಹಂತದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಮುಂದಿನ ವರ್ಷ ಲೋಪ ಆಗದಿರುವಂತೆ ನೋಡಿಕೊಳ್ಳು
ತ್ತೇವೆ ಎಂದು ಆಯುಷ್‌ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.