ADVERTISEMENT

ಆಸ್ಪತ್ರೆಗಳ ಬಲವರ್ಧನೆ|ಶಸ್ತ್ರಚಿಕಿತ್ಸೆ ಪ್ಯಾಕೇಜ್ ದರ ಪರಿಷ್ಕರಣೆ: ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 16:04 IST
Last Updated 31 ಜುಲೈ 2025, 16:04 IST
<div class="paragraphs"><p>ಶಸ್ತ್ರಚಿಕಿತ್ಸೆ </p></div>

ಶಸ್ತ್ರಚಿಕಿತ್ಸೆ

   

(ಸಾಂದರ್ಭಿಕ  ಚಿತ್ರ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆಗೆ ‘ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ’ ಯೋಜನೆಯಡಿ ಮಂಡಿಚಿಪ್ಪು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಯ ಪ್ಯಾಕೇಜ್ ದರ ಪರಿಷ್ಕರಣೆ ಮಾಡಿ, ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. 

ADVERTISEMENT

ಯೋಜನೆಯಡಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಂಡಿಚಿಪ್ಪು ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗೆ ಪ್ರೋತ್ಸಾಹ ನೀಡಲು, ಚಿಕಿತ್ಸಾ ವೆಚ್ಚದ ಶೇ 100 ರಷ್ಟು ಹಣವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಸಂಸ್ಥೆಗೆ ಮರು ಪಾವತಿಸಲು ನಿರ್ದೇಶನ ನೀಡಲಾಗಿದೆ.

ಯೋಜನೆಯಡಿ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ₹ 65 ಸಾವಿರ ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗೆ ₹ 1 ಲಕ್ಷ ನಿಗದಿಪಡಿಸಲಾಗಿದೆ. ಈ ಮೊತ್ತದಲ್ಲಿ ಶೇ 100 ರಷ್ಟು ಹಣವನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ನೀಡಲಾಗುತ್ತದೆ. ಈ ಮೊದಲು ಶೇ 75 ರಷ್ಟು ಹಣವನ್ನು ಮಾತ್ರ ಸಂಸ್ಥೆಗೆ ನೀಡಲಾಗುತ್ತಿತ್ತು. 

ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರಿಗೆ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ತಜ್ಞ ವೈದ್ಯರ ಕೊರತೆಯಿದ್ದರೆ, ಇತರೆ ಸರ್ಕಾರಿ ಅಥವಾ ಸ್ವಾಯತ್ತ ಸಂಸ್ಥೆಯಿಂದ ವೈದ್ಯರ ನೆರವು ಪಡೆಯಬಹುದಾಗಿದೆ. ಅವರಲ್ಲಿ ಖಾಸಗಿ ವೈದ್ಯರು ಶೇ 100 ರಷ್ಟು ಪ್ರೋತ್ಸಾಹಧನ ಹಾಗೂ ಸ್ವಾಯತ್ತ ಆರೋಗ್ಯ ಸಂಸ್ಥೆಗಳ ವೈದ್ಯರು ಶೇ 75 ರಷ್ಟು ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಲಾಗಿದೆ. 

ಖಾಸಗಿ ಅನುಭವಿ ಶಸ್ತ್ರಚಿಕಿತ್ಸಕನಿಗೆ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ₹ 9,750 ಹಾಗೂ ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗೆ ₹ 15 ಸಾವಿರ ನಿಗದಿಪಡಿಸಲಾಗಿದೆ. ಸರ್ಕಾರಿ ಸ್ವಾಯತ್ತ ಸಂಸ್ಥೆಯ ವೈದ್ಯರಿಗೆ ಕ್ರಮವಾಗಿ ₹ 7,313 ಹಾಗೂ ₹ 11,250 ನಿಗದಿಪಡಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.