ADVERTISEMENT

ಧ್ವಜ ಕುರಿತ ಹೇಳಿಕೆ: ಸಿದ್ದರಾಮಯ್ಯಗೆ ಮೊಸರಲ್ಲಿ ಕಲ್ಲು ಹುಡುಕುವ ಚಟ ಎಂದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಆಗಸ್ಟ್ 2022, 14:20 IST
Last Updated 12 ಆಗಸ್ಟ್ 2022, 14:20 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ತ್ರಿವರ್ಣ ಧ್ವಜ ಕುರಿತು ಆರ್‌ಎಸ್‌ಎಸ್‌ ನಾಯಕರ ಹೇಳಿಕೆಗಳನ್ನು ಹಂಚಿಕೊಂಡಿದ್ದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಈ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಎಸಿಬಿ ಕುರಿತ ಹೈಕೋರ್ಟ್ ತೀರ್ಪಿನಿಂದ ಸಿದ್ದರಾಮಯ್ಯನವರ ಮರ್ಯಾದೆ ಮೂರು ಕಾಸಿಗೆ ಹರಾಜಾಗಿದೆ. ಇದಕ್ಕೆ ತೇಪೆ ಹಚ್ಚಿ ವಿಷಯಾಂತರ ಮಾಡಲು ತ್ರಿವರ್ಣ ಧ್ವಜ ಹಿಡಿದುಕೊಳ್ಳುವ ದುಸ್ಸಾಹಸ ಯಾಕೆ’ ಎಂದು ಪ‍್ರಶ್ನಿಸಿದೆ.

‘ನಿಮ್ಮ ನರಿಬುದ್ಧಿ ಯಾರಿಗೂ ತಿಳಿಯದೆನ್ನುವ ಹುಂಬತನವೇಕೆ? ಹಗರಣಗಳ ಸರಮಾಲೆ ಉರುಳಾದೊಡನೆಯೇ ಎಸಿಬಿ ಹುಟ್ಟುಹಾಕಿದ ನಿಮ್ಮ ಅಸಲೀಯತ್ತು ಜನತೆಗೆ ಗೊತ್ತಿದೆ’ ಎಂದು ಟೀಕಿಸಿದೆ.

ADVERTISEMENT

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಮಯದಲ್ಲಿ ಸಿದ್ದರಾಮಯ್ಯ ಎಂದಿನಂತೆ ಹುಳುಕುಬುದ್ಧಿ ಮತ್ತು ವಿಭಜಕ ಮನಸ್ಥಿತಿಯಿಂದ ಬೆತ್ತಲಾಗಿದ್ದಾರೆ. ತ್ರಿವರ್ಣದಲ್ಲಿರುವ ಪವಿತ್ರ ಕೇಸರಿಯನ್ನು ತಮ್ಮ ಬಂಟರ ಸಲುವಾಗಿ ಕೆಂಪು ಮಾಡಿ ಅವಿವೇಕ, ಅಪ್ರಬುದ್ಧತೆ ತೋರಿಸಿ ಗಾಂಪರೊಡೆಯ ಎನಿಸಿಕೊಂಡಿದ್ದಾರೆ. ಹುಂಬ ಚರ್ಚಾಪಟುವಿನ ಪಾಠ ಬಿಜೆಪಿಗೆ ಬೇಕಾಗಿಲ್ಲ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ನರೇಂದ್ರ ಮೋದಿ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರಗಳು ತ್ರಿವರ್ಣ ಧ್ವಜದ ಬಗ್ಗೆ ಅಭಿಮಾನದ ಬುಗ್ಗೆ ಸೃಷ್ಟಿಸುತ್ತಿರುವಾಗ ಈ ವಿಘ್ನಸಂತೋಷಿಗೆ ಮೊಸರಲ್ಲಿ ಕಲ್ಲು ಹುಡುಕುವ ಚಟ. ಸಂವಿಧಾನ ಹಾಗೂ ತ್ರಿವರ್ಣ ಧ್ವಜದ ಮೇಲೆ ತಮಗೆ ಹಕ್ಕಿದೆ ಎನ್ನುವ ಇವರಿಗೆ ಕರ್ತವ್ಯದ ಅರಿವು ಇಲ್ಲದಿರುವುದು ಕೇಡಲ್ಲದೆ ಇನ್ನೇನು’ ಎಂದು ಟ್ವೀಟಿಸಿದೆ.

ಆರ್‌ಎಸ್‌ಎಸ್‌ನ ಪ್ರಮುಖ ನಾಯಕರು ತ್ರಿವರ್ಣ ಧ್ವಜದ ಬಗ್ಗೆ ಹೊಂದಿದ್ದ ನಿಲುವುಗಳನ್ನು ಸಿದ್ಧರಾಮಯ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಬಿಜೆಪಿ ಸರ್ಕಾರ ಧ್ವಜಸಂಹಿತೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆ ಬಳಸಲು ಅವಕಾಶ ನೀಡಿರುವುದನ್ನು ಸಹ ಅವರು ವಿರೋಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.