ADVERTISEMENT

ಸಿ.ಎಂ ಆಪ್ತವಲಯದ ಅಧಿಕಾರಿಗಳ ಎತ್ತಂಗಡಿ?

ಬಿಜೆಪಿ, ಅನರ್ಹ ಶಾಸಕರ ದೂರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 18:37 IST
Last Updated 22 ಸೆಪ್ಟೆಂಬರ್ 2019, 18:37 IST
   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಪ್ತ ವಲಯದ ಕೆಲವು ಅಧಿಕಾರಿಗಳು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಬಿಜೆಪಿ ಶಾಸಕರು ಮತ್ತು ಅನರ್ಹ ಶಾಸಕರು ಆಕ್ರೋಶ ವ್ಯಕ್ತಪಡಿಸಿರುವ ಕಾರಣ ಒಂದರೆಡು ದಿನಗಳಲ್ಲಿ ಕಾರ್ಯದರ್ಶಿ ಮಟ್ಟದ ನಾಲ್ಕರಿಂದ ಐದು ಅಧಿಕಾರಿಗಳ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಐಎಎಸ್‌ ಅಧಿಕಾರಿಗಳಾದ ವಿ.ಪಿ.ಇಕ್ಕೇರಿ, ಶಿವಯೋಗಿ ಕಳಸದ ಸೇರಿ ನಾಲ್ಕರಿಂದ ಐದು ಅಧಿಕಾರಿಗಳ ವಿರುದ್ಧ ಶಾಸಕರು ಯಡಿಯೂರಪ್ಪ ಅವರಿಗೆ ಶನಿವಾರ ದೂರು ನೀಡಿದ್ದಾರೆ. ಯಡಿಯೂರಪ್ಪ ಅವರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ನೀವು ಒಪ್ಪಿಗೆ ಸೂಚಿಸಿದರೂ ಅಧಿಕಾರಿಗಳಿಂದ ಕೆಲಸಗಳು ಆಗುತ್ತಿಲ್ಲ. ಈ ರೀತಿಯಲ್ಲಿ ಆದರೆ, ನಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡಿಸುವುದು ಹೇಗೆ. ಒಬ್ಬೊಬ್ಬ ಅಧಿಕಾರಿಗೂ ಎರಡರಿಂದ ಮೂರು ಜವಾಬ್ದಾರಿಗಳನ್ನು ಕೊಟ್ಟಿದ್ದೀರಿ. ಹೀಗಾಗಿ ಇವರು ನಮ್ಮ ಕೆಲಸಗಳ ಬಗ್ಗೆ ಆಸ್ಥೆ ತೋರಿಸುತ್ತಿಲ್ಲ’ ಎಂದು ಎಂಟರಿಂದ ಹತ್ತು ಶಾಸಕರು ಮುಖ್ಯಮಂತ್ರಿಯವರಿಗೆ ಹೇಳಿದರು.

ADVERTISEMENT

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು ‘ಯಾರ ವಿರುದ್ಧ ದೂರುಗಳಿವೆಯೋ ಅವರನ್ನು ಬದಲಿಸುತ್ತೇನೆ. ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಕೆಲಸಗಳು ಬೇಗ ಆಗಬೇಕು ಎಂಬ ಕಾರಣಕ್ಕೆ ಶಾಸಕರು ನಮ್ಮ ಬಳಿಗೆ ಬರುತ್ತಾರೆ. ಅಧಿಕಾರಿಗಳು ಶಾಸಕರ ಕೆಲಸಗಳನ್ನು ಯಾವುದೇ ಕಾರಣಕ್ಕೂ ತಡವಾಗಿ ಮಾಡಬಾರದು. ಆದಷ್ಟು ಬೇಗನೆ ವ್ಯವಸ್ಥೆ ಸರಿಪಡುತ್ತೇನೆ’ ಎಂದು ಭರವಸೆ ನೀಡಿದರು.

ಸದ್ಯಕ್ಕೆ ಮುಖ್ಯಮಂತ್ರಿಯವರ ಸಲಹೆಗಾರ ಎಂ.ಲಕ್ಷ್ಮಿನಾರಾಯಣ ಅವರೇ ಶಾಸಕರ ಕೆಲಸಗಳನ್ನು ನೋಡಿಕೊಳ್ಳುವಂತಾಗಿದೆ. ಅವರ ಕಾರ್ಯಭಾರ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ವಿ.‍ಪಿ.ಇಕ್ಕೇರಿ ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯ ಜತೆಗೆ ಬಿಎಂಆರ್‌ಡಿಎ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವಯೋಗಿ ಕಳಸದ ಅವರು ಮುಖ್ಯಮಂತ್ರಿಯವರ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಬ್ಬರನ್ನು ಬೇರೆ ಕಡೆಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿಯವರೇ ಅಧಿಕಾರ ವಹಿಸಿಕೊಂಡ ದಿನದಿಂದಲೂ ತಮ್ಮ ವಯಸ್ಸನ್ನೂ ಲೆಕ್ಕಿಸಿದೇ ಒಂದು ದಿವೂ ಬಿಡುವು ತೆಗದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರ ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.