ADVERTISEMENT

ಹಿಂದುಳಿದ ವರ್ಗಗಳಿಗೆ ಕ್ಷೇತ್ರ, ಪಕ್ಷದಲ್ಲೂ ಪ್ರಾಶಸ್ತ್ಯ: ಕ್ಯಾಪ್ಟನ್ ಅಜಯ್ ಸಿಂಗ್

ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕ್ಯಾಪ್ಟನ್‌ ಅಜಯ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 19:46 IST
Last Updated 21 ಮಾರ್ಚ್ 2023, 19:46 IST
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ಮಧು ಬಂಗಾರಪ್ಪ, ರಾಮಲಿಂಗಾ ರೆಡ್ಡಿ, ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಅಜಯ್ ಸಿಂಗ್‌ ಯಾದವ್‌, ಜಿ.ಪರಮೇಶ್ವರ, ಬಿ.ಕೆ.ಹರಿಪ್ರಸಾದ್ ಇದ್ದರು
ನಗರದ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ಮಧು ಬಂಗಾರಪ್ಪ, ರಾಮಲಿಂಗಾ ರೆಡ್ಡಿ, ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ, ಅಜಯ್ ಸಿಂಗ್‌ ಯಾದವ್‌, ಜಿ.ಪರಮೇಶ್ವರ, ಬಿ.ಕೆ.ಹರಿಪ್ರಸಾದ್ ಇದ್ದರು   

ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದುಳಿದ ವರ್ಗಗಳಿಗೆ ಹೆಚ್ಚು ಸ್ಥಾನಗಳನ್ನು ದೊರಕಿಸುವ ಜತೆಗೆ, ಪಕ್ಷದ ಪ್ರಮುಖ ಹುದ್ದೆಗಳಲ್ಲೂ ಪ್ರಾಶಸ್ತ್ಯ ಸಿಗಬೇಕು ಎಂದು ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಕ್ಯಾಪ್ಟನ್‌ ಅಜಯ್‌ ಸಿಂಗ್‌ ಯಾದವ್‌ ಹೇಳಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಹೆಚ್ಚಿನ ಮುಖಂಡರಿಗೆ ಪಕ್ಷದ ಟಿಕೆಟ್‌ ಸಿಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕನಿಷ್ಠ 100 ಸೀಟುಗಳನ್ನು ನೀಡಲು ಕೋರಲಾಗುವುದು. ಸ್ಕ್ರೀನಿಂಗ್‌ ಸಮಿತಿ ಸೇರಿದಂತೆ ಪಕ್ಷದ ಪ್ರಮುಖ ಹುದ್ದೆಗಳಿಗೂ ಪರಿಗಣಿಸಲು ಬೇಡಿಕೆ ಇಡಲಾಗಿದೆ ಎಂದರು.

ADVERTISEMENT

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಜನರು ಶೇ 52ರಷ್ಟು ಇದ್ದಾರೆ. ದೇವರಾಜ ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ಸಿದ್ದರಾಮಯ್ಯ ಸೇರಿದಂತೆ ಹಿಂದುಳಿದ ವರ್ಗದ ಅತಿ ಹೆಚ್ಚು ನಾಯಕರು ರಾಜ್ಯದ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ್ದೇ ಕಾಂಗ್ರೆಸ್‌. ಈ ರೀತಿಯ ಸಾಮಾಜಿಕ ನ್ಯಾಯ ಕಾಂಗ್ರೆಸ್‌ನಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ. ಅದಕ್ಕಾಗಿ ಎಲ್ಲರೂ ಸಂಘಟಿತ ಪ್ರಯತ್ನದ ಮೂಲಕ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೀವಮಾನವಿಡೀ ಮೀಸಲಾತಿ ವಿರೋಧಿಸಿಕೊಂಡು ಬಂದ ಬಿಜೆಪಿ ಈಗ ಪರಿಶಿಷ್ಟರ ಮೀಸಲಾತಿ ವಿಷಯದಲ್ಲಿ ನಾಟಕವಾಡುತ್ತಿದೆ. ಜಾತಿ ವ್ಯವಸ್ಥೆ ಬಲವಾಗಿ ಬೇರೂರಲು ಮನು ಸಂಸ್ಕೃತಿಯೇ ಕಾರಣ. ಭಾರತದ ಜಾತಿ ವ್ಯವಸ್ಥೆ ಚಲನಶೀಲತೆ ಕಳೆದುಕೊಂಡಿದೆ. ಹಾಗಾಗಿಯೇ, ಜಾತಿ ನಿರ್ಮೂಲನೆ ಕಷ್ಟಕರವಾಗಿದೆ. ಮೊದಲು ಗುಲಾಮಗಿರಿ ಸಂಸ್ಕೃತಿ ತೊಲಗಬೇಕು. ಅದಕ್ಕಾಗಿ ಶಿಕ್ಷಣ ಪಡೆಯುವುದು, ಆರ್ಥಿಕವಾಗಿ ಸಬಲರಾಗುವುದು ಇಂದಿನ ತುರ್ತು ಅಗತ್ಯ ಎಂದರು.

ಕಾಂಗ್ರೆಸ್‌ ನಾಯಕರಾದ ಎಂ. ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ, ಜಿ.ಪರಮೇಶ್ವರ, ಬಿ.ಕೆ.ಹರಿಪ್ರಸಾದ್‌, ರಾಮಲಿಂಗಾ ರೆಡ್ಡಿ, ಸುದರ್ಶನ್, ರಮೇಶ್ ಬಾಬು, ಮೋಹನ್ ಉಪಸ್ಥಿತರಿದ್ದರು.

‘ಗ್ಯಾರಂಟಿಯಿಂದ ಹೆಚ್ಚಿದ ಭರವಸೆ’

ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಭರವಸೆಗಳು ಎಲ್ಲ ವರ್ಗದವರನ್ನು ತಲುತ್ತಿವೆ. ಕಾಂಗ್ರೆಸ್ ಮೇಲೆ ಭರವಸೆ ಇನ್ನಷ್ಟು ಹೆಚ್ಚಾಗುತ್ತಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಕಡಿಮೆ ಅವಧಿಯಲ್ಲಿ ಸಂಘಟಿತ ಕೆಲಸ ನಡೆದಿದೆ. ಪಕ್ಷದ ಸಂಘಟನೆ ಇನ್ನಷ್ಟು ಬಲಪಡಿಸಲಾಗುವುದು. ಎಲ್ಲರೂ ಸೇರಿ ಬೆವರ ಬದಲು, ರಕ್ತ ಬಸಿದಾದರೂ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡೋಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.