
ಬೆಂಗಳೂರು: ‘ರೌಡಿ ಶೀಟರ್ ಬಿಕ್ಲು ಶಿವು ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರು ತನಿಖೆಗೆ ಸಹಕರಿಸಿಲ್ಲ. ಸುಳ್ಳು ಮಾಹಿತಿ ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸಿದ್ದಾರೆ’ ಎಂದು ರಾಜ್ಯ ಸರ್ಕಾರ, ಹೈಕೋರ್ಟ್‌ಗೆ ಅರುಹಿದೆ.
ನಿರೀಕ್ಷಣಾ ಜಾಮೀನು ಕೋರಿ ಬಸವರಾಜ ಅವರು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿಐಡಿ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ‘ಶಿವು ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸುವಲ್ಲಿ ಬಸವರಾಜ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಬಿಕ್ಲು ಶಿವು ಕೊಲೆ ಮಾಡಲಾಗಿದೆ. 1ನೇ ಆರೋಪಿ ಜಗದೀಶ್ ಮತ್ತು 20ನೇ ಆರೋಪಿ ಅಜಿತ್‌ಗೆ ಬೈರತಿ ಬಸವರಾಜ ಅವರು ಫೋನ್ ಮಾಡಿ ಸಂಭಾಷಣೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ತನಿಖಾಧಿಕಾರಿಗಳು ಸಂಗ್ರಹಿಸಿರುವ ಸಿಡಿಆರ್ ದಾಖಲೆಗಳಿವೆ’ ಎಂದರು.
‘ಪ್ರಯಾಗ್ ರಾಜ್‌ನಲ್ಲಿ 2025ರ ಫೆಬ್ರುವರಿಯಲ್ಲಿ ನಡೆದ ಮಹಾ ಕುಂಭಮೇಳಕ್ಕೆ ಜಗದೀಶ್ ಮತ್ತು ಬೈರತಿ ಬಸವರಾಜ ಅವರು ಒಂದೇ ಪಿಎನ್‌ಆರ್ (ಪ್ಯಾಸೆಂಜರ್ ನೇಮ್ ರೆಕಾರ್ಡ್) ನಂಬರ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಆರೋಪಿಗಳು ಒಂದೇ ಸ್ಥಳದಲ್ಲಿದ್ದ ಬಗ್ಗೆ ಜಿಯೋಗ್ರಾಫಿಕಲ್ ಮ್ಯಾಪಿಂಗ್ ಇದೆ’ ಎಂದು ಈ ಕುರಿತ ವಿವರಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
‘ಜಗದೀಶ್ ಜನ್ಮ ದಿನದ ಸಂಭ್ರಮದ ವೇಳೆ ಒಟ್ಟಿಗೆ ಫೋಟೊ ತೆಗೆಸಿಕೊಂಡಿದ್ಧಾರೆ. ತನಿಖೆ ವೇಳೆ ಈ ಬಗ್ಗೆ ವಿವರಣೆ ಕೇಳಿದಾಗ, ಜಗದೀಶ್ ಮತ್ತು ಅಜಿತ್ ಯಾರೆಂಬುದೇ ನನಗೆ ಗೊತ್ತಿಲ್ಲ. ಅವರು ಕ್ಷೇತ್ರದ ಕಾರ್ಯಕರ್ತರು. ಜಗದೀಶ್ ಮತ್ತು ಅಜಿತ್ ಅವರ ಫೋಟೊಗಳನ್ನು ಟಿವಿಯಲ್ಲಿ ನೋಡಿದಾಗಲೇ ನನಗೆ ಅವರ ಬಗ್ಗೆ ತಿಳಿದು ಬಂತು ಎಂಬ ಕ್ಲುಪ್ತ ಉತ್ತರ ನೀಡಿದ್ದಾರೆ’ ಎಂದು ವಿವರಿಸಿದರು.
‘ಪ್ರಕರಣದ ತ್ವರಿತ ತನಿಖೆ ನಡೆಯಬೇಕು ಎಂದು ವಾದಿಸುವ ಇವರು ತಮ್ಮ ವಿರುದ್ಧ ಮಾತ್ರ ತನಿಖೆ ನಡೆಯಬಾರದು ಎಂದು ಬಯಸುತ್ತಾರೆ. ತನಿಖೆ ಆರೋಪಿಯ ಇಚ್ಛೆಯ ಅನುಸಾರ ನಡೆಯುವಂತಹುದಲ್ಲ. ಹಾಗಾಗಿ, ಬೈರತಿ ಬಸವರಾಜ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದ್ದು, ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದರು. ಸುದೀರ್ಘ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.