
ಬೆಂಗಳೂರು: ‘ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ವಿರುದ್ಧ ಕೋಕಾ ಕಾಯ್ದೆ ಹೇರುವಿಕೆ ಕಾನೂನುಬಾಹಿರ’ ಎಂದು ಅವರ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
‘ಕೋಕಾ (ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ಹೇರಿರುವ ಆದೇಶ ರದ್ದುಪಡಿಸಬೇಕು’ ಎಂದು ಕೋರಿ ಪ್ರಕರಣದ ಐದನೇ ಆರೋಪಿಯಾದ ಶಾಸಕ ಬಸವರಾಜ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಸವರಾಜ್ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ ‘ಅರ್ಜಿದಾರರ ವಿರುದ್ಧ ಕೋಕಾ ಕಾಯ್ದೆಯ ನಿಯಮಗಳನ್ನು ಹೇರಿರುವುದು ಕಾನೂನುಬಾಹಿರ. ಅರ್ಜಿದಾರರು ಸಿಐಡಿ ತನಿಖೆಗೆ ಸಹಕರಿಸಲು ಸದಾ ಸಿದ್ಧರಿದ್ದಾರೆ. ಯಾವ ಸಮಯಕ್ಕೆ ಹಾಜರಾಗಬೇಕು ಎಂದು ತಿಳಿಸಿದರೆ ಅದರಂತೆ ನಡೆದುಕೊಳ್ಳುತ್ತಾರೆ’ ಎಂದರು.
ಇದಕ್ಕೆ ಪ್ರತಿಯಾಗಿ ಸಿಐಡಿಯ ಆಕ್ಷೇಪಣೆ ಸಲ್ಲಿಸಿದ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ್ ‘ಹೈಕೋರ್ಟ್ ಅರ್ಜದಾರರಿಗೆ ನೀಡಿರುವ ಮಧ್ಯಂತರ ರಕ್ಷಣೆಯ ಆದೇಶ ತೆರವುಗೊಳಿಸಬೇಕು’ ಎಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಪೀಠ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿತು. ಅಂತೆಯೇ ಬೈರತಿ ಬಸವರಾಜ್ ಅವರಿಗೆ ರಕ್ಷಣೆ ನೀಡಲಾಗಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಿ ನ್ಯಾಯಪೀಠ ಆದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.