ಗೋಪೂಜೆ
ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಬಲಿಪಾಡ್ಯಮಿ ದಿನದಂದು ಕಡ್ಡಾಯವಾಗಿ ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸುವಂತೆ ಧಾರ್ಮಿಕ ದತ್ತಿ ಆಯುಕ್ತರು ಸೂಚಿಸಿದ್ದಾರೆ.
ಮುಜರಾಯಿ ಸಚಿವರ ಟಿಪ್ಪಣಿ ಆಧರಿಸಿ ಈ ಸಂಬಂಧ ಮಂಗಳವಾರ ಸುತ್ತೋಲೆ ಹೊರಡಿಸಲಾಗಿದೆ.
ಬಲಿಪಾಡ್ಯಮಿಯ ದಿನವಾದ ಅಕ್ಟೋಬರ್ 22ರಂದು (ಬುಧವಾರ) ಧಾರ್ಮಿಕ ದತ್ತಿ ಇಲಾಖೆಯ ಅಧೀನದ ಎಲ್ಲ ದೇವಸ್ಥಾನಗಳು ಮತ್ತು ಸಂಸ್ಥೆಗಳಲ್ಲಿ ಸನಾತನ ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ಗೋಪೂಜೆ ನೆರವೇರಿಸಬೇಕು’ ಎಂದು ಸೂಚಿಸಲಾಗಿದೆ.
ಪ್ರತಿ ದೇವಾಲಯದಲ್ಲಿ ಒಂದೊಂದು ಗೋಮಾತೆಯನ್ನು ಪೂಜಿಸಬೇಕು. ಗೋವುಗಳಿಗೆ ಸ್ನಾನ ಮಾಡಿಸಿ, ದೇವಾಲಯಕ್ಕೆ ಕರೆತಂದು ಅರಿಶಿನ, ಕುಂಕುಮ, ಹೂವುಗಳಿಂದ ಅಲಂಕರಿಸಿ, ಅಕ್ಕಿ, ಬೆಲ್ಲ, ಬಾಳೆಹಣ್ಣು, ಸಿಹಿ ತಿನಿಸು ಮುಂತಾದ ಗೋಗ್ರಾಸವನ್ನು ಹಸುವಿಗೆ ನೀಡಬೇಕು. ಗೋವುಗಳನ್ನು ಧೂಪ, ದೀಪಗಳಿಂದ ಪೂಜಿಸಿ, ನಮಸ್ಕರಿಸುವ ವ್ಯವಸ್ಥೆ ಮಾಡಬೇಕು. ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.