
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಪ್ರಜಾವಾಣಿ ಚಿತ್ರ; ಅನೂಪ್ ಟಿ ರಾಘ
ಬಳ್ಳಾರಿ: ‘ಬಳ್ಳಾರಿಗೆ ಲಭಿಸಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಾವ ಮಾಹೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ, ಆಯೋಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಿದ್ಧತೆಗಳೇನು?’
ಇದು ಕನ್ನಡಿಗರ, ಸಾಹಿತ್ಯಾಸಕ್ತರ, ಬಳ್ಳಾರಿ ಜನರ ಬಹುದಿನಗಳ ಪ್ರಶ್ನೆ. ಆದರೆ, ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸರ್ಕಾರಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಮ್ಮೇಳನವು ಡೋಲಾಯಮಾನ ಸ್ಥಿತಿಗೆ ಸಿಲುಕಿದೆ. 66 ವರ್ಷಗಳ ಬಳಿಕ ಸಮ್ಮೇಳನ ಸಿಕ್ಕರೂ, ಅದನ್ನು ಸಂಭ್ರಮಿಸಲಾಗದಂಥ ಸ್ಥಿತಿಗೆ ಬಳ್ಳಾರಿ ಜಿಲ್ಲೆ ತಲುಪಿದೆ.
ಇತ್ತೀಚೆಗೆ ಅಂತ್ಯಗೊಂಡ ಬೆಳಗಾವಿಯ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರು, 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಉತ್ತರ ನೀಡಿರುವ ಸರ್ಕಾರ ಸಮ್ಮೇಳನದ ದಿನಾಂಕ ತಿಳಿಸಲು ಸೋತಿದೆ.
‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಅಧ್ಯಕ್ಷ ಮಹೇಶ್ ಜೋಶಿ ಅವರ ಮೇಲಿನ ಆರೋಪಗಳ ಕುರಿತು ಸಹಕಾರ ಇಲಾಖೆಯಿಂದ ವಿಚಾರಣೆ ನಡೆದಿದೆ. ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿವೆ. 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲಾಗಿಲ್ಲ. ಹೀಗಾಗಿ, ಕಸಾಪ ಅಧ್ಯಕ್ಷರು ಈ ಹಿಂದೆ ಘೋಷಣೆ ಮಾಡಿದಂತೆ 2025ರ ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಸಲು ಸಾಧ್ಯವಾಗಿಲ್ಲ’ ಎಂದು ಸಚಿವ ಶಿವರಾಜ ಎಸ್.ತಂಗಡಗಿ ತಿಳಿಸಿದ್ದಾರೆ.
ಸಮ್ಮೇಳನವನ್ನು ಯಾವಾಗ ನಡೆಸಲಾಗುತ್ತದೆ ಎಂಬ ಪ್ರಶ್ನೆಗೆ, ಸರ್ಕಾರ ಉತ್ತರವನ್ನೇ ನೀಡಿಲ್ಲ. ಹೀಗಾಗಿ ಸಮ್ಮೇಳನ ಪ್ರಶ್ನೆಯಾಗಿಯೇ ಉಳಿದಿದೆ.
ಬಳ್ಳಾರಿ ಸಮ್ಮೇಳನಕ್ಕಾಗಿ ಈಗಾಗಲೇ ₹10 ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿಳಿಸಿದೆ. ಸಮ್ಮೇಳನ ಸಂಬಂಧ ವಿವಿಧ ಸಮಿತಿಗಳು ರಚನೆಯಾದ ನಂತರ ಸಮಿತಿಗಳು ನೀಡುವ ಒಟ್ಟಾರೆ ಪ್ರಸ್ತಾವನೆ ಮತ್ತು ಅಂದಾಜು ವೆಚ್ಚಗಳನ್ನು ಗಮನಿಸಿ ಬಳ್ಳಾರಿ ಜಿಲ್ಲಾಡಳಿತವು ಸಲ್ಲಿಸುವ ಪ್ರಸ್ತಾವನೆಯನ್ನು ಪರಿಶೀಲಿಸಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದೂ ಸಚಿವರು ಭರವಸೆ ನೀಡಿದ್ದಾರೆ.
ಲೇಖಕಿ, ಬುಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಹೆಸರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಜೂನ್‌ನಲ್ಲಿ ಘೋಷಣೆ ಮಾಡಲಾಗಿತ್ತು.
ವಿಶ್ವ ಕನ್ನಡ ಸಮ್ಮೇಳನ ಇಲ್ಲ: ಮೂರನೇ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಪ್ರಸ್ತಾವನೆಯು ಸರ್ಕಾರದ ಮುಂದಿಲ್ಲ ಎಂದೂ ಸರ್ಕಾರ ತಿಳಿಸಿದೆ.
ಜಗತ್ತಿನಲ್ಲೆಡೆ ಪಸರಿಸಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು ನುಡಿ ಬಗ್ಗೆ ಚರ್ಚಿಸಲೆಂದು 1985ರಲ್ಲಿ ಮೈಸೂರಿನಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು. 2011ರಲ್ಲಿ ಬೆಳಗಾವಿಯಲ್ಲಿ ಎರಡನೇ ಸಮ್ಮೇಳನ ನಡೆದಿತ್ತು. ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು 2017ರಲ್ಲಿ ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಸಿದ್ದರಾಮಯ್ಯ ನೇತೃತ್ವದ ಆಗಿನ ಸರ್ಕಾರ ಅದಕ್ಕಾಗಿ ₹20 ಕೋಟಿ ಮಂಜೂರು ಮಾಡಿತ್ತು.
ಪರಿಷತ್‌ಗೆ ಈಗ ಅಧ್ಯಕ್ಷರಿಲ್ಲ. ಸಮ್ಮೇಳನ ನಡೆಸುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಆ ಬಳಿಕ ದಿನಾಂಕ ಪ್ರಕಟಣೆ ಸಾಧ್ಯ.ಶಿವರಾಜ ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
ಕನ್ನಡ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆಯಾಗಿತ್ತು. ಪರಿಷತ್ತಿನ 110 ವರ್ಷಗಳ ಇತಿಹಾಸದಲ್ಲಿ ನಡೆದಿರುವುದು 87 ಸಮ್ಮೇಳನ. ಈ ನಡುವಿನ ಹಲವು ವರ್ಷಗಳಲ್ಲಿ ಸಮ್ಮೇಳನ ನಡೆದಿಲ್ಲ. ಕೆಲವೊಂದು ವರ್ಷಗಳಲ್ಲಿ ಎರಡೆರಡು ಬಾರಿ ಸಮ್ಮೇಳನ ನಡೆದಿರುವುದು ಸಮ್ಮೇಳನಗಳ ಕುರಿತು ಪರಿಷತ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿಯಿಂದ ಗೊತ್ತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.