ADVERTISEMENT

ಬಳ್ಳಾರಿ ಗಲಾಟೆ ಪ್ರಕರಣ ಮುಚ್ಚಿ ಹಾಕಲು ಎರಡು ಬಾರಿ ಶವಪರೀಕ್ಷೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 16:20 IST
Last Updated 5 ಜನವರಿ 2026, 16:20 IST
ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ   

ಬೆಂಗಳೂರು: ಬಳ್ಳಾರಿಯಲ್ಲಿ ಗುಂಡಿಗೆ ಬಲಿಯಾದ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ್‌ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಕಾನೂನುಬಾಹಿರವಾಗಿ ಎರಡು ಬಾರಿ ನಡೆಸಲಾಗಿದೆ. ಆದ್ದರಿಂದ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೇಂದ್ರ  ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮದೇ ಪಕ್ಷದ ಕಾರ್ಯಕರ್ತನ ಕೊಲೆಯನ್ನು ಮುಚ್ಚಿಹಾಕಲು ಕಾಂಗ್ರೆಸ್‌ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸಿದೆ. ಆ ಕಾರಣಕ್ಕಾಗಿ ನತದೃಷ್ಟ ಕಾರ್ಯಕರ್ತನ ಮೃತದೇಹವನ್ನು ಎರಡು ಬಾರಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಆರೋಪಿಸಿದರು.

‘ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಏನು ಫಲಿತಾಂಶ ಹೊರಬಂತು? ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ಏನು ಮಾಹಿತಿ ಇದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ಎರಡನೇ ಮರಣೋತ್ತರ ಪರೀಕ್ಷೆಗೆ ಯಾರು ಒತ್ತಡ ಹೇರಿದರು? ಮೊದಲ ಪರೀಕ್ಷೆಯಲ್ಲಿ ವ್ಯತಿರಿಕ್ತ ವರದಿ ಬಂದಿತು ಎಂಬ ಕಾರಣಕ್ಕೆ ಎರಡನೇ ಬಾರಿ ಪರೀಕ್ಷೆ ನಡೆಸಲಾಯಿತೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಈ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರನ್ನು ಸಿಕ್ಕಿಹಾಕಿಸಲು ಸರ್ಕಾರ ತನಗೆ ಬೇಕಾದ ರೀತಿ ವರದಿ ಪಡೆಯಲು ಎರಡನೇ ಮರಣೋತ್ತರ ಪರೀಕ್ಷೆ ನಡೆಸಿದೆ. ಇದು ಸರ್ಕಾರಕ್ಕೆ ತಿರುಗುಬಾಣವಾಗಲಿದೆ’ ಎಂದರು.

‘ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಈ ರೀತಿ ಆಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕ ಭರತ್‌ ರೆಡ್ಡಿ ಪರ ನಿಲ್ಲುತ್ತೇನೆ ಎನ್ನುತ್ತಾರೆ. ಸತೀಶ್‌ ರೆಡ್ಡಿ ಗನ್‌ಮ್ಯಾನ್‌ ಗನ್‌ನಿಂದ ಫೈಯರ್ ಆಗಿದೆ ಅಂತ ಸ್ವತಃ ಅವರೇ ಹೇಳಿದ್ದಾರೆ. ಆದರೆ, ಗೃಹ ಸಚಿವರು ಆತನ ಬಂಧನಕ್ಕೆ ಆದೇಶ ಮಾಡದೇ ಕಾಲಹರಣ ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ದೂರಿದರು.

‘ಯೂಸ್‌ಲೆಸ್‌ ಗೃಹ ಸಚಿವರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಏನೂ ಆಗುವುದಿಲ್ಲ. ಗೃಹ ಇಲಾಖೆ ಸತ್ತಿದೆಯೋ ಬದುಕಿದೆಯೋ ಎಂಬುದು ಗೊತ್ತಿಲ್ಲ. ಬಳ್ಳಾರಿಗೆ ಅಷ್ಟು ಗನ್‌ಗಳು ಎಲ್ಲಿಂದ, ಹೇಗೆ ಬಂದವು? ಅವೇನು ಪಾಕಿಸ್ತಾನದಿಂದ ಬಂದವಾ? ಇದಕ್ಕೆ ಡಿಕೆಶಿ ಉತ್ತರ ಕೊಡಲಿ. ಕೊಲೆಗಡುಕರಿಗೆ ಸರ್ಕಾರ ರಕ್ಷಣೆ ಕೊಡುತ್ತಿದೆ. ಇದು ಕೊಲೆಗಡುಕರಿಗಾಗಿಯೇ ಇರುವ ಸರ್ಕಾರ’ ಎಂದು ಹರಿಹಾಯ್ದರು.

‘ಈ ದುರ್ಘಟನೆಯ ಸೂತ್ರಧಾರಿ ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿಯನ್ನು ಏಕೆ ಈವರೆಗೂ ಬಂಧಿಸಿಲ್ಲ? ಆತನಿಗೆ ರಾಜಾತಿಥ್ಯ ನೀಡಿ ಸರ್ಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೀರಾ’ ಎಂದು ಪ್ರಶ್ನಿಸಿದರು.

‘ಕರ್ನಾಟಕದಲ್ಲಿ ಜಂಗಲ್ ರಾಜ್’

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನಾಶವಾಗಿದ್ದು ಜಂಗಲ್ ರಾಜ್ ಶುರುವಾಗಿದೆ. ಅಧಿಕಾರಿಗಳನ್ನು ಗುಲಾಮರ ರೀತಿ ಈ ಸರ್ಕಾರ ನಡೆಸಿಕೊಳ್ಳುತ್ತಿದೆ’ ಎಂದು ಕುಮಾರಸ್ವಾಮಿ ದೂರಿದರು. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಸಂದರ್ಭ ಬರುವಾಗ ಒಂದು ವೋಟು ತಪ್ಪಬಾರದು ಎಂಬ ಕಾರಣಕ್ಕೆ ಭರತ್‌ ರೆಡ್ಡಿ ಪರ ಮಾತನಾಡುತ್ತಿದ್ದಾರೆ ಎಂದರು.

‘ಎಚ್‌ಡಿಕೆಯದ್ದು ಗಂಭೀರ ರಾಜಕಾರಣ ಅಲ್ಲ’

‘ಕುಮಾರಸ್ವಾಮಿ ಗಂಭೀರ ರಾಜಕಾರಣ ಮಾಡುವವರಲ್ಲ. ಮಾಧ್ಯಮಗಳ ಮುಂದೆ ಮಾತ್ರ ರಾಜಕಾರಣ ಮಾಡುವವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ಅಮೆರಿಕದಿಂದ ಬೇಕಾದರೂ ಜನಾರ್ದನ ರೆಡ್ಡಿ ಭದ್ರತೆ ತೆಗೆದುಕೊಳ್ಳಲಿ’ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ‘ಗ್ರೇಟ್ ಡಿಸಿಎಂ’ ಎಂದು ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು. ಈ ಕುರಿತು ಸುದ್ದಿಗಾರರು ಗಮನ ಸೆಳೆದಾಗ ‘ಕುಮಾರಸ್ವಾಮಿ ಮತ್ತು ಇತರರ ಹೇಳಿಕೆಗೆ ಉತ್ತರ ನೀಡುವ ಅಗತ್ಯ ನನಗಿಲ್ಲ. ಅವರು ತಮ್ಮ ಖುಷಿಗೆ ಏನಾದರೂ ಹೇಳಿಕೊಳ್ಳಲಿ’ ಎಂದರು.

‘ಕುಮಾರಸ್ವಾಮಿ ಒಳ್ಳೆಯದ್ದಕ್ಕೆ ಹೇಳಿದ್ದಾರೊ ಕೆಟ್ಟದ್ದಕ್ಕೆ ಹೇಳಿದ್ದಾರೊ ಒಟ್ಟಿನಲ್ಲಿ ನನ್ನನ್ನು ಗ್ರೇಟ್ ಡಿಸಿಎಂ ಎಂದು ಕರೆದಿದ್ದರಲ್ಲ’ ಎಂದರು.

‘ಕ್ರಿಮಿನಲ್ ಶಾಸಕರಿಗೆ ಶಿವಕುಮಾರ್ ಬೆಂಬಲ ನೀಡುತ್ತಿದ್ದಾರೆ’ ಎಂಬ ಜನಾರ್ದನ ರೆಡ್ಡಿ ಹೇಳಿಕೆ ಬಗ್ಗೆ ಕೇಳಿದಾಗ ‘ನನ್ನ ಮೇಲೂ ಕ್ರಿಮಿನಲ್ ಕೇಸ್ ದಾಖಲಿಸಿ ನನಗೂ ಕ್ರಿಮಿನಲ್ ಪಟ್ಟ ಕೊಟ್ಟಿದ್ದಾರೆ. ಜನಾರ್ದನ ರೆಡ್ಡಿ ತಮ್ಮ ಇತಿಹಾಸದ ಪುಸ್ತಕ ತೆರೆದು ಯಾರ ಮೇಲೆ ಕ್ರಿಮಿನಲ್ ಕೇಸ್ ಇದೆ ಎಂಬುದನ್ನು ನೋಡಿಕೊಳ್ಳಲಿ. ಮಾಜಿ ಮುಖ್ಯಮಂತ್ರಿ ಶಾಸಕರು ಸಂಸದರ ಮೇಲೆ ಕ್ರಿಮಿನಲ್ ಕೇಸ್‌ಗಳು ಇಲ್ಲವೇ? ಎಫ್ಐಆರ್ ದಾಖಲಿಸಿದ ನಂತರ ನ್ಯಾಯಾಲಯದಿಂದ ತೀರ್ಪು ಬರುವವರೆಗೂ ಕ್ರಿಮಿನಲ್‌ ಅನ್ನು ಆರೋಪಿ ಎಂದೇ ಪರಿಗಣಿಸಲಾಗುತ್ತದೆ ಅಲ್ಲವೇ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.