ADVERTISEMENT

ಬಳ್ಳಾರಿ | ಜಿಲ್ಲಾಸ್ಪತ್ರೆ ವೈದ್ಯನ ಅಪಹರಣಕಾರರ ಬಂಧನ: ಒಬ್ಬನಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 4:49 IST
Last Updated 29 ಜನವರಿ 2025, 4:49 IST
   

ಬಳ್ಳಾರಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಸುನಿಲ್ ಕುಮಾರ್ ಅವರನ್ನು ಅಪಹರಿಸಿದ್ದ ಏಳು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಒಬ್ಬನ ಕಾಲಿಗೆ ಗುಂಡಿನೇಟು ಬಿದ್ದಿದೆ.

ಬಳ್ಳಾರಿ ನಗರ ವಾಸಿಗಳಾದ ಶ್ರೀಕಾಂತ್ (44), ರಾಕೇಶ್(44), ತರುಣ್(22), ಅರುಣ್(25), ಭೋಜರಾಜ್(25), ಸಾಯಿಕುಮಾರ್(21) ಮತ್ತು ಪುರುಷೋತ್ತಮ್ ಬಂಧಿತರು.

ಆರೋಪಿಗಳನ್ನು, ಬುಧವಾರ ಮುಂಜಾನೆ ಸ್ಥಳ ಮಹಜರು ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಕರೆದುಕೊಂಡು ಹೋಗುತ್ತಿದ್ದ ವೇಳೆ ಶ್ರೀಕಾಂತ್ ಎಂಬಾತ ಗಾಂಧಿನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕಾಳಿಂಗ ಅವರ ಮೇಲೆ ಹಲ್ಲೆ ನಡೆಸಿದ್ದ.

ADVERTISEMENT

ಈ ವೇಳೆ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಸಿಂಧೂರ್ ಅವರು ಶ್ರೀಕಾಂತ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡ ಶ್ರೀಕಾಂತನನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ( ವಿಮ್ಸ್)ಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹಲ್ಲೆಗೆ ಒಳಗಾದ ಕಾನ್‌ಸ್ಟೆಬಲ್ ಕಾಳಿಂಗ ಅವರಿಗೆ ಬೇರೆಡೆ ಪ್ರತ್ಯೇಕವಾಗಿ ಚಿಕಿತ್ಸೆ ಕೊಡಿಸಲಾಗಿದೆ.

ಜನವರಿ 25ರ ಮುಂಜಾನೆ ಆರು ಗಂಟೆ ಸುಮಾರಿನಲ್ಲಿ ನಗರದ ಸತ್ಯನಾರಾಯಣಪೇಟೆ ಬಳಿ ವೈದ್ಯ ಸುನಿಲ್ ಕುಮಾರ್ ಅವರನ್ನು ಅಪಹರಣ ಮಾಡಲಾಗಿತ್ತು. ₹2 ಕೋಟಿ ಹಣ, ₹3 ಕೋಟಿಯಷ್ಟು ಚಿನ್ನದ ಗಟ್ಟಿ ನೀಡುವಂತೆ ಅಪಹರಣಕಾರರು ಬೇಡಿಕೆ ಇಟ್ಟಿದ್ದರು. ಆದರೆ, ಅದೇ ದಿನ ರಾತ್ರಿ 8ರ ಸುಮಾರಿನಲ್ಲಿ ಕುರುಗೋಡು ಬಳಿಯ ಸೋಮಸಮುದ್ರದ ಬಳಿ ಸುನಿಲ್ ಕುಮಾರ್ ಅವರನ್ನು ಬಿಟ್ಟಿದ್ದ ದುಷ್ಕರ್ಮಿಗಳು, ₹300 ನೀಡಿ ಮನೆಗೆ ಹೋಗುವಂತೆ ಹೇಳಿ ಹೋಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.