ADVERTISEMENT

ಬಂಡೀಪುರದಲ್ಲಿ ಕರಗದ ಕಾಳ್ಗಿಚ್ಚು; ಕೇರಳಕ್ಕೆ ವ್ಯಾಪಿಸಿದ ಬೆಂಕಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 6:17 IST
Last Updated 24 ಫೆಬ್ರುವರಿ 2019, 6:17 IST
   

ಚಾಮರಾಜನಗರ/ ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ಸುತ್ತಮುತ್ತಲಿನ ಪ್ರದೇಶವನ್ನು ಮೂರು ದಿನಗಳಿಂದ ಸುಡುತ್ತಿರುವ ಕಾಳ್ಗಿಚ್ಚು ಭಾನುವಾರ ಕೇರಳ ಅರಣ್ಯ ಪ್ರದೇಶಕ್ಕೆ ವಿಸ್ತರಿಸಿದೆ.

ಇಲ್ಲಿನ ಕುರುಚಲು ಗುಡ್ಡಗಳನ್ನು ಆಹುತಿ ತೆಗೆದುಕೊಂಡಿದ್ದ ಕಾಳ್ಗಿಚ್ಚನ್ನು ನಂದಿಸುವ ಪ್ರಯತ್ನ ಮುಂದುವರಿದಿದ್ದರೂ ಬೀಸುತ್ತಿರುವ ಗಾಳಿಯಿಂದ ಬೆಂಕಿ ವಿಸ್ತರಿಸಿಕೊಳ್ಳುತ್ತಿದೆ. ಕೇರಳದ ವಯನಾಡು ಕಾಡುಗಳಲ್ಲಿ ಈಗ ಕಾಳ್ಗಿಚ್ಚು ಧಗಧಗಿಸುತ್ತಿದೆ.

ಬಂಡೀಪುರ ಸಫಾರಿಗೂ ಇದರಿಂದ ಅಡ್ಡಿಯಾಗಿ ಎನ್ನಲಾಗುತ್ತಿದ್ದು, ಭಾನುವಾರ ರಾಜ್ಯದ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿಯಿದೆ.

ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರ ನೆರವಿನಿಂದ ಕಾಳ್ಗಿಚ್ಚು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಗಾಳಿಯ ವೇಗಕ್ಕೆ ಬೆಂಕಿ ತೀವ್ರವಾಗಿ ಪಸರಿಸುತ್ತಿದ್ದು, ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕಿವೆ.

ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಬರುವ ಗೋಪಾಲಸ್ವಾಮಿ ಬೆಟ್ಟ ವಲಯದ ಕೆಬ್ಬೇಪುರ– ಚೌಡಹಳ್ಳಿ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡು ಬಂದ ಬೆಂಕಿ ಮಗುವಿನಹಳ್ಳಿ ಜಾರ್ಕಲ್ಲು ಕ್ವಾರಿ ಗುಡ್ಡ, ಗುಮ್ಮನಗುಡ್ಡ, ಬಾಳೆತಾರ್ಕೊರೆ ಗುಡ್ಡ, ಗೌರಿ ಕಲ್ಲು ಬೆಟ್ಟದವರೆಗೆ ವ್ಯಾಪಿಸಿದೆ. ಶನಿವಾರ ಮಧ್ಯಾಹ್ನ 12ರ ವೇಳೆಗೆ ಮೇಲುಕಾಮನಹಳ್ಳಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್‌ 66)– ಊಟಿ ರಸ್ತೆ ಉದ್ಯಾನದ ಗೇಟ್‌ ಬಳಿಗೆ ಬೆಂಕಿ ತಲುಪಿದ್ದು, ಭಾನುವಾರ ಕೇರಳ ವಯನಾಡು ಭಾಗಕ್ಕೆ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.