ADVERTISEMENT

ಬಂಡೀಪುರ: ‘ರಾತ್ರಿ ಸಂಚಾರ, ಮೇಲ್ಸೇತುವೆ ಬೇಡ’

#ನೈಟ್‌ ಟ್ರಾಫಿಕ್‌ಬೇಡ ಅಭಿಯಾನದ ಭಾಗವಾಗಿ ಪರಿಸರ ಪ್ರೇಮಿಗಳ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 15:41 IST
Last Updated 27 ಅಕ್ಟೋಬರ್ 2018, 15:41 IST
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ಹಾಗೂ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ಪರಿಸರ ಪ್ರೇಮಿಗಳು ಶನಿವಾರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು
ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ಹಾಗೂ ಮೇಲ್ಸೇತುವೆ ನಿರ್ಮಾಣ ವಿರೋಧಿಸಿ ಪರಿಸರ ಪ್ರೇಮಿಗಳು ಶನಿವಾರ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67 ಮತ್ತು 212ರಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದು. ಮೇಲ್ಸೇತುವೆ ನಿರ್ಮಿಸಬಾರದು ಎಂದು ಆಗ್ರಹಿಸಿ ನೂರಾರು ಪರಿಸರ ಪ್ರೇಮಿಗಳು ಶನಿವಾರ ತಾಲ್ಲೂಕಿನ ಮದ್ದೂರು ಚೆಕ್‌ಪೋಸ್ಟ್ ಬಳಿ ಮೌನ ಪ್ರತಿಭಟನೆ ನಡೆಸಿದರು.

‘ನೈಟ್‌ ಟ್ರಾಫಿಕ್‌ ಬೇಡ’ ಎಂಬ ಅಭಿಯಾನವನ್ನು ಪರಿಸರ ಕಾರ್ಯಕರ್ತರ ತಂಡ ಆರಂಭಿಸಿದೆ. ಈ ಪ್ರತಿಭಟನೆಗೆ ಕೇರಳ, ತಮಿಳುನಾಡು ಹಾಗೂ ರಾಜ್ಯದ ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳ ಪ‍್ರತಿನಿಧಿಗಳು, ರೈತ ಸಂಘಟನೆಗಳ ಮುಖಂಡರು, ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಬೆಂಬಲ ನೀಡಿದರು.

ಮದ್ದೂರು ಚೆಕ್‌ಪೋಸ್ಟ್‌ ಬಳಿ ಸೇರಿದ ಪ್ರತಿಭಟನಾಕಾರರು, ಸುಲ್ತಾನ್‌ ಬತ್ತೇರಿಗೆ ಹೋಗುವ ಹೆದ್ದಾರಿ ಬಳಿ ಹಾಗೂ ಇಕ್ಕೆಲಗಳಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ADVERTISEMENT

‘ಕಾಡು ಉಳಿಸಿ’, ‘ನಿಮ್ಮ ಹೊಟ್ಟೆ ತುಂಬಿಸಿಕೊಳ್ಳಲು, ನಮ್ಮ ಹೊಟ್ಟೆಯನ್ನು ಬಗೆಯಬೇಡಿ’, ‘ಒಂದು ಮರ ಕಡಿದರೆ ಒಂದು ಕಾಡು ಕಡಿದಂತೆ’, ‘ಮನುಷ್ಯರಿಲ್ಲದೆ ಕಾಡು ಬದುಕುತ್ತದೆ, ಕಾಡಿಲ್ಲದೆ ಮನುಷ್ಯ ಬದುಕಬಹುದೇ?’, ‘ಕಾಡು ಪ್ರಾಣಿಗಳಿಲ್ಲದ ಪರಿಸರ ಸ್ಮಶಾನದಂತೆ’... ಮುಂತಾದ ಬರಹಗಳನ್ನು ಹೊಂದಿದ್ದ ಫಲಕಗಳು ಪ್ರತಿಭಟನೆಯಲ್ಲಿ ಗಮನಸೆಳೆದವು.

‘ಒಂಬತ್ತು ವರ್ಷಗಳಿಂದ ಯಾವುದೇ ತಗಾದೆ ಇರಲಿಲ್ಲ. ಇತ್ತೀಚೆಗೆ ಏಕಾಏಕಿ ಈ ವಿಷಯ ಮುನ್ನೆಲೆಗೆಬಂದಿರುವುದನ್ನು ನೋಡಿದರೆ, ಸರ್ಕಾರದಲ್ಲಿ ಇರುವವರು ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಕಾಡು ಉಳಿಸಲು ಮೂರು ರಾಜ್ಯಗಳಿಂದ ಬಂದಿದ್ದಾರೆ. ಅವರ ಭಾವನೆಗಳಿಗೆ ಬೆಲೆ ಕೊಡಿ. ಏನೇ ಆದರೂ ಸರಿ,ಈ ಯೋಜನೆಗಳ ಅನುಷ್ಠಾನಕ್ಕೆ ನಾವು ಬಿಡುವುದಿಲ್ಲ. ಹೋರಾಟ ಮುಂದುವರಿಸುತ್ತೇವೆ’ ಎಂದು ಜೋಸೆಪ್‌ ಹೂವರ್‌ ಹೇಳಿದರು.

ಪರಿಸರ ಪ್ರೇಮಿ ತನುಜಾ, ‘ರಾತ್ರಿ ಸಮಯದಲ್ಲಿ ಸಂಚಾರ ನಿರ್ಬಂಧವಿದ್ದರೂ ಮೂರು ರಾಜ್ಯಗಳ 12 ಬಸ್‍ ಹಾಗೂ ತುರ್ತು ವಾಹನಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಎಲ್ಲ ವಾಹನಗಳಿಗೆ ಅವಕಾಶ ನೀಡಿದರೆ ಪ್ರಾಣಿಗಳ ನೆಮ್ಮದಿ ಹಾಳಾಗುತ್ತದೆ. 9 ಗಂಟೆಗಳ ಕಾಲ ಪ್ರಾಣಿಗಳು ನೆಮ್ಮದಿಯಿಂದ ಇರಲು ಬಿಡಬೇಕು. ಇದಕ್ಕಾಗಿ ಸರ್ಕಾರ ಯಾವ ಒತ್ತಡಕ್ಕೂ ಮಣಿಯಬಾರದು’ ಎಂದು ಆಗ್ರಹಿಸಿದರು.

‘ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು’

ಕೇರಳದ ವಯನಾಡಿನ ಪ್ರಕೃತಿ ಸಂರಕ್ಷಣಾ ಸಮಿತಿಯ ಗಂಗಾಧರನ್ ಮಾತನಾಡಿ, ‘ಕೇರಳದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾತ್ರಿ ಹೊತ್ತು ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ನ್ಯಾಯಾಲಯದ ಮೊರೆ ಹೋಗಿವೆ. ಈ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಪ್ರಕೃತಿ, ಕಾಡು ಪ್ರಾಣಿಗಳು ಉಳಿಯುವುದಿಲ್ಲ, ಟಿಂಬರ್ ಮಾಫಿಯಾ ಹೆಚ್ಚಾಗುತ್ತದೆ’ ಎಂದರು. ‘ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಉದ್ದೇಶದಿಂದ ವಯನಾಡು ಶಾಸಕ ಕೃಷ್ಣ ಪ್ರಸಾದ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಅನುಮತಿ ನೀಡಬಾರದು ಎಂದು ನಾವು ಸಂಘಟನೆಯ ವತಿಯಿಂದ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದೇವೆ. ಈ ವಿಷಯದಲ್ಲಿ ಕೈಗೊಂಡಿರುವ ತೀರ್ಮಾನವನ್ನು ಕರ್ನಾಟಕ ಸರ್ಕಾರ ಯಾವುದೇ ಕಾರಣಕ್ಕೆ ಬದಲಿಸಬಾರದು’ ಎಂದು ಅವರು ಹೇಳಿದರು. ‘ಪರಿಸರ ಹಾಳಾಗುವುದರಿಂದ ಕೇರಳ ಮತ್ತು ಕೊಡಗಿನಲ್ಲಿ ಸಂಭವಿಸಿದಂತಹ ಅನಾಹುತಗಳು ಘಟಿಸುತ್ತವೆ. ಅದ್ದರಿಂದ ಇಲ್ಲಿನ ಪರಿಸರ ಪ್ರೇಮಿಗಳು ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.