ADVERTISEMENT

ಲೆನ್ಸ್‌ಗಿಂತಲೂ ದುಬಾರಿಯಾಗುತ್ತಿದೆ ಸಫಾರಿ: ಛಾಯಾಗ್ರಹಣದಿಂದ ಹ್ಯವಾಸಿಗಳು ವಿಮುಖ

ಬಂಡೀಪುರದಲ್ಲಿ ವನ್ಯಜೀವಿ ಛಾಯಾಗ್ರಹಣ ಎಂಬುದು ಗಗನ ಕುಸುಮ

ಕೆ.ಎಸ್.ಗಿರೀಶ್
Published 9 ಏಪ್ರಿಲ್ 2021, 6:41 IST
Last Updated 9 ಏಪ್ರಿಲ್ 2021, 6:41 IST
ದಮ್ಮನಕಟ್ಟೆ ಸಫಾರಿ ಕೇಂದ್ರ
ದಮ್ಮನಕಟ್ಟೆ ಸಫಾರಿ ಕೇಂದ್ರ   

ಮೈಸೂರು: ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಹೆಚ್ಚಿಸಿರುವ ಸಫಾರಿ ಮತ್ತು ಲೆನ್ಸ್‌ ಆಧಾರಿತ ಕ್ಯಾಮೆರಾ ಟಿಕೆಟ್‌ ದರ ಗ್ರಾಮೀಣ ಭಾಗದ ವನ್ಯಜೀವಿ ಛಾಯಾಗ್ರಾಹಕರಿಗೆ ಭಾರಿ ಪೆಟ್ಟು ನೀಡಿದೆ.

10 ಬಾರಿ ಸಫಾರಿ ಟಿಕೆಟ್‌ ದರಕ್ಕೆ ಒಂದು ಸೆಕೆಂಡ್‌ ಹ್ಯಾಂಡ್‌ ಲೆನ್ಸ್ಅನ್ನೇ ಖರೀದಿಸಬಹುದಾಗಿದೆ. ಹೀಗಾಗಿ, ದರ ಏರಿಕೆ ಪ್ರಮಾಣ ವಿಪರೀತವಾಗಿದ್ದು, ವನ್ಯಜೀವಿ ಛಾಯಾಚಿತ್ರ ತೆಗೆಯಲು ಅಸಾಧ್ಯ ಎಂದು ಅನೇಕ ಛಾಯಾಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಹೆಚ್ಚು ಎಂ.ಎಂ.ಲೆನ್ಸ್‌ ಹೊಂದಿರುವ ಕ್ಯಾಮೆರಾ ಇದೆ ಎಂದಾಕ್ಷಣ ಅವರೇನೂ ಕುಬೇರರಲ್ಲ. ಬಹಳಷ್ಟು ಮಂದಿಯಲ್ಲಿರುವುದು ಸೆಕೆಂಡ್‌ ಹ್ಯಾಂಡ್ ಲೆನ್ಸ್. ಇವುಗಳ ದರವು ದುಬಾರಿಯಾಗಿಲ್ಲ’‌ ಎಂದು ಛಾಯಾಗ್ರಾಹಕರು ಅರಣ್ಯ ಇಲಾಖೆಯ ಕ್ರಮವನ್ನು ಟೀಕಿಸುತ್ತಿದ್ದಾರೆ.

ADVERTISEMENT

ಕಡಿಮೆ ಗುಣಮಟ್ಟದ ಲೆನ್ಸ್‌ಗಳನ್ನು ಖರೀದಿಸಿ ವನ್ಯಜೀವಿ ಛಾಯಾಗ್ರಾಹಕರಾಗಬೇಕೆಂದು ಕಾಡುಮೇಡು ಅಲೆಯುತ್ತಿರುವವರು ಸಾಕಷ್ಟು ಮಂದಿ ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕಿನಲ್ಲಿದ್ದಾರೆ. ಇವರೆಲ್ಲರಿಗೂ ಇದೀಗ ವನ್ಯಜೀವಿ ಛಾಯಾಚಿತ್ರ ತೆಗೆಯುವುದು ಗಗನಕುಸುಮ ಎನಿಸಿದೆ.

‘70ರಿಂದ 200 ಎಂ.ಎಂ. ಲೆನ್ಸ್‌ ಬೆಲೆ ₹ 30 ಸಾವಿರದಿಂದ ₹ 3 ಲಕ್ಷದವರೆಗೆ ಇದೆ. ಇವುಗಳಲ್ಲಿ ಕೆಲವು ಕಂಪನಿಗಳ ಲೆನ್ಸ್ ದರ ₹ 15ರಿಂದ 20 ಸಾವಿರ ಇದೆ. ಸೆಕೆಂಡ್‌ ಹ್ಯಾಂಡ್ ಲೆನ್ಸ್‌ಗಳು ಆರೇಳು ಸಾವಿರಕ್ಕೆಲ್ಲ ದೊರೆಯುತ್ತಿವೆ. ಇಂತಹ ಕಡಿಮೆ ದರದ ಲೆನ್ಸ್ ಖರೀದಿಸಿರುವ ಸಾಕಷ್ಟು ಸಂಖ್ಯೆಯ ಛಾಯಾಗ್ರಾಹಕರು ಗ್ರಾಮೀಣ ಭಾಗದಲ್ಲಿದ್ದು, ಇವರಿಗೆ ಸಫಾರಿಯ ದುಬಾರಿ ಶುಲ್ಕ ಹೊರೆಯಾಗಿ ಪರಿಣಮಿಸಿದೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಜಿ.ಎಸ್.ರವಿಶಂಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ವನ್ಯಜೀವಿ ಛಾಯಾಚಿತ್ರ ತೆಗೆದ ತಕ್ಷಣ ಯಾರಿಗೂ ದೊಡ್ಡಮೊತ್ತದ ಬಹುಮಾನ ಬರುವುದಿಲ್ಲ. ಎಲ್ಲೋ ಒಂದಿಬ್ಬರಿಗೆ ಬಹುಮಾನ ಲಭಿಸಬಹುದು. ಹೆಚ್ಚು ಎಂದರೆ, ಉಡುಗೊರೆ ಕೊಡುವುದಕ್ಕೆ, ಸಣ್ಣಪುಟ್ಟ ಛಾಯಾಚಿತ್ರ ಪ್ರದರ್ಶನಗಳಲ್ಲಿ ಇಡುವುದಕ್ಕೆ, ಕ್ಯಾಲೆಂಡರ್‌ಗಳಿಗಷ್ಟೇ ಸೀಮಿತವಾಗುತ್ತವೆ. ಬಹಳಷ್ಟು ಛಾಯಾಚಿತ್ರ ಸ್ಪರ್ಧೆಗಳ ಬಹುಮಾನದ ಮೊತ್ತ ₹ 1 ಸಾವಿರವೂ ದಾಟುವುದಿಲ್ಲ ಎಂದು ಅವರು ಹೇಳುತ್ತಾರೆ.

ಏರಿಕೆ ಮಾಡಿರುವ ಟಿಕೆಟ್ ದರವು ಪ್ರವಾಸಿಗರಿಗೆ ಇರಲಿ. ಸ್ಥಳೀಯರಿಗೆ ಒಂದಿಷ್ಟು ರಿಯಾಯಿತಿಗಳನ್ನು ನೀಡಬೇಕು ಎಂದು ಸ್ಥಳೀಯ ವನ್ಯಜೀವಿ ಛಾಯಾಗ್ರಾಹಕರು ಮನವಿ ಮಾಡುತ್ತಾರೆ.

ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಛಾಯಾಚಿತ್ರ ತೆಗೆಯುತ್ತಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲಿರುವ ರುಡ್‌ಸೆಟ್‌ಗಳಲ್ಲಿಯೂ ಇದೀಗ ವನ್ಯಜೀವಿ ಛಾಯಾಚಿತ್ರ ಕುರಿತ ತರಬೇತಿಗಳು ನಡೆಯುತ್ತಿವೆ. ಇಲ್ಲಿ ಕಲಿತವರು ಕಡಿಮೆ ಬೆಲೆಯ ಲೆನ್ಸ್ ಖರೀದಿಸಿರುತ್ತಾರೆ. ಇವರಿಗೆಲ್ಲ ಇದು ಹೊರೆ ಎನಿಸಿದೆ.

ಹಣ, ಛಾಯಾಚಿತ್ರ ಪ್ರತಿ ಕೇಳುತ್ತಾರೆ...

ವನ್ಯಜೀವಿ ಛಾಯಾಚಿತ್ರ ತೆಗೆಯುವುದು ಎಂದರೆ ಸುಲಭದ ಕೆಲಸವಲ್ಲ. ಕೇವಲ ಟಿಕೆಟ್ ಖರೀದಿಸಿ ವಾಹನ ಏರಿದರೆ ಸಾಕಾಗುವುದಿಲ್ಲ. ವನ್ಯಜೀವಿಗಳು ಕಂಡ ಕೂಡಲೇ ಒಂದಷ್ಟು ಹೊತ್ತು ವಾಹನ ನಿಲ್ಲಿಸು ಎಂದು ಚಾಲಕರಿಗೆ ಹಣ ಕೊಡಬೇಕು.ಉಡುಗೊರೆ ರೂಪದಲ್ಲಿ ತಮ್ಮ ಸ್ನೇಹಿತರಿಗೆ ನೀಡಲು ಸಫಾರಿ ಕೇಂದ್ರದ ಅರಣ್ಯ ಇಲಾಖೆ ಸಿಬ್ಬಂದಿಗೆ ಛಾಯಾಚಿತ್ರಗಳ ಪೈಕಿ ಕೆಲವನ್ನು ನೀಡಬೇಕು ಎಂದು ಹೆಸರು ಬಹಿರಂಗಪಡಿಸಲು ಬಯಸದ ವನ್ಯಜೀವಿ ಛಾಯಾಗ್ರಾಹಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಧರಿಸಿರುವ ಬಟ್ಟೆ ನೋಡಿ ದರ ನಿಗದಿ!’

‘ಇಡೀ ದೇಶದಲ್ಲಿ ಇಲ್ಲದ ಲೆನ್ಸ್ ಆಧಾರಿತ ಕ್ಯಾಮೆರಾ ಟಿಕೆಟ್ ದರ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಇದೆ. ಧರಿಸಿರುವ ಬಟ್ಟೆ ನೋಡಿ ಟಿಕೆಟ್ ದರ ನಿಗದಿಪಡಿಸಿದಂತೆ ಇದಾಗಿದೆ. ಇದನ್ನು ಹಗಲುದರೋಡೆ ಎನ್ನದೇ ಬೇರೆ ಏನು ಹೇಳಬೇಕು’ ಎಂದು ವನ್ಯಜೀವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ ಪ್ರಶ್ನಿಸುತ್ತಾರೆ.

‘ಕ್ಯಾಮೆರಾ ಇರುವ ಮೊಬೈಲ್‌ಗಳನ್ನು ಸಫಾರಿಯಲ್ಲಿ ಬಳಸುವಂತಿಲ್ಲ ಎಂಬ ನಿಯಮ ಬಂದರೂ ಆಶ್ಚರ್ಯವಿಲ್ಲ. ಈ ರೀತಿ ಹಣ ಮಾಡಿ ಕಾಡನ್ನು ನಿರ್ವಹಣೆ ಮಾಡುತ್ತೇವೆ ಎನ್ನುವುದೇ ಮುರ್ಖತನ. ಲೆನ್ಸ್‌ ಆಧಾರಿತ ಕ್ಯಾಮೆರಾ ಟಿಕೆಟ್‌ ದರವನ್ನು ಸಂಪೂರ್ಣ ರದ್ದು ಮಾಡಬೇಕು’ ಎಂದು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.