ADVERTISEMENT

ಬೆಂಗಳೂರು ಡಿ.ಜೆ.ಹಳ್ಳಿ ಗಲಭೆ ಪ್ರಕರಣ: 17 ಆರೋಪಿಗಳ ಬಂಧಿಸಿದ ಎನ್‌ಐಎ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 15:37 IST
Last Updated 21 ಡಿಸೆಂಬರ್ 2020, 15:37 IST
ಡಿ.ಜೆ. ಹಳ್ಳಿ ಗಲಭೆ ಸಂದರ್ಭದ ಚಿತ್ರ (ಪ್ರಜಾವಾಣಿ ಸಂಗ್ರಹ)
ಡಿ.ಜೆ. ಹಳ್ಳಿ ಗಲಭೆ ಸಂದರ್ಭದ ಚಿತ್ರ (ಪ್ರಜಾವಾಣಿ ಸಂಗ್ರಹ)   

ಬೆಂಗಳೂರು: ನಗರದಲ್ಲಿ ನಡೆದಿದ್ದ ಗಲಭೆ ಪ್ರಕರಣ ಸಂಬಂಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ಮುಖಂಡರು ಸೇರಿದಂತೆ 17 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 11ರಂದು ರಾತ್ರಿ ದುಷ್ಕರ್ಮಿಗಳ ತಂಡ ಗಲಭೆ ಸೃಷ್ಟಿಸಿತ್ತು. ಠಾಣೆಗೆ ಹಾಗೂ 60ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿತ್ತು. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ನುಗ್ಗಿ ಬೆಂಕಿ ಹಚ್ಚಲಾಗಿತ್ತು.

ಗಲಭೆ ಬಗ್ಗೆ ದಾಖಲಾಗಿರುವ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎನ್‌ಐಎ ಅಧಿಕಾರಿಗಳು. ‘ಎಸ್‌ಡಿಪಿಐ, ಪಿಎಫ್‌ಐ ಸಂಘಟನೆ ಮುಖಂಡರೇ ಗಲಭೆಗೆ ಪ್ರಚೋದನೆ ನೀಡಿದ್ದರು. ಪೂರ್ವಭಾವಿ ಸಭೆ ನಡೆಸಿ ಗಲಭೆ ಮಾಡಿಸಿದ್ದರು’ ಎಂಬ ಸಂಗತಿಯನ್ನು ಬಯಲು ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಿ, ಸಂಘಟನೆ ಮುಖಂಡರು ಸೇರಿ 17 ಮಂದಿಯನ್ನು ಸೆರೆ ಹಿಡಿದಿದ್ದಾರೆ.

‘ಎಸ್‌ಡಿಪಿಐ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಮೊಹಮ್ಮದ್ ಷರೀಫ್, ಕೆ.ಜಿ.ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಅಹ್ಮದ್, ಮುಖಂಡರಾದ ರೂಬಾನ್ ವಗಾಸ್, ಶಬ್ಬರ್ ಖಾನ್ ಹಾಗೂ ಶೆಖ್ ಅಜ್ಮಲ್‌ ಪ್ರಮುಖ ಆರೋಪಿಗಳು. ಇವರೆಲ್ಲ ಸೇರಿಕೊಂಡು ಆಗಸ್ಟ್ 11ರಂದು ಸಂಜೆ ಥಣಿಸಂದ್ರ ಹಾಗೂ ಕೆ.ಜಿ.ಹಳ್ಳಿ ವಾರ್ಡ್‌ನಲ್ಲಿ ಸಭೆ ಮಾಡಿದ್ದರು. ಅಲ್ಲಿಯೇ ಗಲಭೆ ಬಗ್ಗೆ ಸಂಚು ರೂಪಿಸಿದ್ದರು’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

‘ಸಭೆ ಮುಗಿಸಿದ್ದ ಎಲ್ಲರೂ ಅಖಂಡ ಶ್ರೀನಿವಾಸ್‌ಮೂರ್ತಿ ಮನೆ, ಕೆ.ಜಿ.ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಠಾಣೆಗೆ ಹೋಗಿ ಗಲಭೆ ಸೃಷ್ಟಿಸಿದ್ದರು. ಠಾಣೆಗೆ ಹಾಗೂ ವಾಹನಕ್ಕೆ ಬೆಂಕಿ ಹಚ್ಚಿದ್ದರು. ಎಸ್‌ಡಿಪಿಐ ನಾಗವಾರ ವಾರ್ಡ್ ಘಟಕದ ಅಧ್ಯಕ್ಷ ಅಬ್ಬಾಸ್ ಎಂಬಾತ, ತನ್ನ ಸಹಚರರಾದ ಅಜಿಲ್ ಪಾಷಾ ಹಾಗೂ ಇರ್ಫಾನ್‌ ಖಾನ್, ಅಕ್ಬರ್ ಖಾನ್ ಜೊತೆ ಠಾಣೆ ಎದುರೇ ನಿಂತು ಗಲಾಟೆ ಮಾಡಲು ಪ್ರಚೋದನೆ ನೀಡಿದ್ದ’ ಎಂದು ಮೂಲಗಳು ತಿಳಿಸಿವೆ.

‘ಆರೋಪಿಗಳಾದ ಸದ್ದಾಂ, ಸೈಯದ್ ಸುಹೇಲ್, ಖಲೀಂಮುಲ್ಲಾ, ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಪ್ರಚೋದಿಸಿದ್ದರು. ಪ್ರಚೋದನಾಕಾರಿ ಪೋಸ್ಟ್ ಹಾಗೂ ಬರಹಗಳನ್ನು ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ನಾನಾ ಗುಂಪು ಹಾಗೂ ಪುಟಗಳಿಗೂ ಪೋಸ್ಟ್‌ಗಳನ್ನು ಹಂಚಿಕೆ ಮಾಡಿದ್ದರು. ಅದುವೇ ಜನರು ಸೇರಲು ಕಾರಣವಾಯಿತು’ ಎಂದೂ ಎನ್‌ಐಎ ಮೂಲಗಳು ಹೇಳಿವೆ.

‘ಈ ಪ್ರಕರಣದಲ್ಲಿ ಹೊಸದಾಗಿ 17 ಮಂದಿ ಬಂಧಿಸುವ ಮೂಲಕ, ಬಂಧಿತರ ಸಂಖ್ಯೆ 187 ಆಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.