ADVERTISEMENT

ಬೆಂಗಳೂರು | ಮದ್ಯ ಮಾರಾಟ ಸನ್ನದು ನೀಡಲು ₹25 ಲಕ್ಷ ಲಂಚ: ಅಬಕಾರಿ ಡಿಸಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 16:04 IST
Last Updated 17 ಜನವರಿ 2026, 16:04 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಮದ್ಯ ಮಾರಾಟ ಸನ್ನದು ನೀಡಲು ₹25 ಲಕ್ಷ ಲಂಚ ಪಡೆಯುತ್ತಿದ್ದ ಬೆಂಗಳೂರು ಅಬಕಾರಿ ಜಿಲ್ಲೆ–8ರ ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್‌ ನಾಯ್ಕ್‌ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಲಕ್ಷ್ಮೀನಾರಾಯಣ.ಸಿ ಅವರು ಲಾಡ್ಜ್‌ ಅಂಡ್ ರೆಸ್ಟೋರೆಂಟ್‌ ತೆರೆಯಲು ಸಿದ್ಧತೆ ನಡೆಸಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಮದ್ಯಪೂರೈಕೆಗೆ ಸಿಎಲ್‌–7 ಸನ್ನದು ಪಡೆಯಲು ಅವರು ಅರ್ಜಿ ಸಲ್ಲಿಸಿದ್ದರು ಎಂದು ಲೋಕಾಯುಕ್ತ ಸಂಸ್ಥೆಯು ತಿಳಿಸಿದೆ.

ADVERTISEMENT

ಸನ್ನದು ಪಡೆಯಲು ಅಗತ್ಯವಿದ್ದ ಎಲ್ಲ ಷರತ್ತುಗಳನ್ನು ಪೂರೈಸಿದ ನಂತರ ₹21 ಲಕ್ಷ ಶುಲ್ಕವನ್ನೂ ಲಕ್ಷ್ಮೀನಾರಾಯಣ ಅವರು ಪಾವತಿಸಿದ್ದರು. ಆದರೆ ಅಬಕಾರಿ ಉಪ ಆಯುಕ್ತ ಜಗದೀಶ್‌ ನಾಯ್ಕ್‌ ಅವರು ಅರ್ಜಿಯನ್ನು ತಡೆಹಿಡಿದಿದ್ದರು. ಅರ್ಜಿಗೆ ಸಹಿಯನ್ನೂ ಮಾಡಿರಲಿಲ್ಲ, ತಿರಸ್ಕರಿಸಿಯೂ ಇರಲಿಲ್ಲ. ಈ ಬಗ್ಗೆ ಲಕ್ಷ್ಮೀನಾರಾಯಣ ಪ್ರಶ್ನಿಸಿದಾಗ, ₹80 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಾಹಿತಿ ನೀಡಿದೆ.

ಲಕ್ಷ್ಮೀನಾರಾಯಣ ಅವರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್‌ ದೇವರಾಜು ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ದೂರುದಾರರು ಶನಿವಾರ ನಗರದ ಮೈಸೂರು ರಸ್ತೆಯ, ಬ್ಯಾಟರಾಯನ‍ಪುರದಲ್ಲಿ ಇರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಸಂಕೀರ್ಣಕ್ಕೆ ತೆರಳಿದ್ದರು ಎಂದು ವಿವರಿಸಿದೆ.

ಸಂಕೀರ್ಣದಲ್ಲಿರುವ ಅಬಕಾರಿ ಉಪವಿಭಾಗದ ಕಚೇರಿಯಲ್ಲಿಯೇ ಜಗದೀಶ್‌ ನಾಯ್ಕ್‌, ಅಬಕಾರಿ ಸೂಪರಿಂಟೆಂಡೆಂಟ್‌ ಕೆ.ಎಂ.ತಮ್ಮಣ್ಣ ಮತ್ತು ಅಬಕಾರಿ ಕಾನ್‌ಸ್ಟೆಬಲ್‌ ಲಕ್ಕಪ್ಪ ಗನಿ ಅವರು ದೂರುದಾರರಿಂದ ₹25 ಲಕ್ಷ ಪಡೆದುಕೊಂಡಿದ್ದರು. ಇದೇ ವೇಳೆ ದಾಳಿ ನಡೆಸಿ, ಮೂವರನ್ನೂ ಬಂಧಿಸಲಾಯಿತು ಎಂದು ತಿಳಿಸಿದೆ.

ಮೂವರು ಆರೋಪಿಗಳು ಈ ಹಿಂದೆ ಹಲವರ ಬಳಿ ಲಂಚ ಕೇಳಿರುವ ಬಗ್ಗೆ ದೂರುಗಳು ಬಂದಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣ ದಾಖಲಿಸಲು ಪರಿಶೀಲನೆ ನಡೆಯುತ್ತಿದೆ ಎಂದು ಲೋಕಾಯುಕ್ತ ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.