
ಸಾಂದರ್ಭಿಕ ಚಿತ್ರ
ಕೃಪೆ: ಎಐ
ಬೆಂಗಳೂರು: ಕೊಲೆ ಅರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ತರುಣ ಕೈದಿಯೊಬ್ಬನ ಮದುವೆಗೆಂದೇ ಪೆರೋಲ್ ಮಂಜೂರು ಮಾಡಿದ್ದ ಹೈಕೋರ್ಟ್, ಈಗ ಆತನ ‘ಮಧುಚಂದ್ರ’ಕ್ಕೆ ಪೆರೋಲ್ ಅನುಮತಿಸಲು ‘ಇನ್ನಷ್ಟು ಸಮಯ ಕಾಯಬೇಕು’ ಎಂದು ತಾತ್ಕಾಲಿಕ ತಣ್ಣೀರೆರಚಿದೆ..!
ಕೋಮಲೆಯೊಬ್ಬಳ ಕೊಲೆ ಆರೋಪ ಹೊತ್ತಿದ್ದ ಯುವಕನಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್‌ನ 51ನೇ ಕೋರ್ಟ್ ನ್ಯಾಯಾಧೀಶ ಸಿ.ಬಿ.ಸಂತೋಷ್ ಅವರು 2024ರ ನವೆಂಬರ್ 26ರಂದು ಜೀವಾವಧಿ ಶಿಕ್ಷೆ ವಿಧಿಸಿದ್ದರು. ಅಂದಿನಿಂದಿಲೂ ಜೈಲಿನಲ್ಲಿ ದಿನ ಕಳೆಯುತ್ತಾ ಪ್ರಾಯಶ್ಚಿತ್ತದ ಪಠಣ ಮಾಡುತ್ತಿರುವ ಕೈದಿಗೀಗ 28–29ರ ತುಂಬು ಪ್ರಾಯ.
ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಈತ ಪರೋಲ್‌ಗೆ ಅರ್ಜಿ ಹಾಕಿದ್ದ. ಈ ಅರ್ಜಿಯನ್ನು ಜೈಲಿನ ಅಧಿಕಾರಿಗಳು 2025ರ ಜನವರಿ 16ರಂದು ತಿರಸ್ಕರಿಸಿ ಹಿಂಬರಹ ನೀಡಿದ್ದರು.
‘ಈ ಪ್ರಕರಣದಲ್ಲಿ ಅಪರಾಧಿ ಸ್ವತಃ ತನ್ನ ಮದುವೆಗೇ ಪೆರೋಲ್ ಕೇಳುತ್ತಿದ್ದಾನೆ. ಕೈದಿಯ ಮಗ, ಮಗಳು, ತಂಗಿ ಅಥವಾ ಅಕ್ಕನ ಮದುವೆಗೆ ಮಾತ್ರ ಪರೋಲ್ ನೀಡಲಾಗುತ್ತದೆ. ಅದೂ ತುರ್ತು ಪೆರೋಲ್ ನೀಡುವುದು ಏನಿದ್ದರೂ ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಾತ್ರವೇ’ ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನು ಪ್ರಶ್ನಿಸಿ ಕೈದಿಯ ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು. ‘ವಯಸ್ಸಿಗೆ ಬಂದಿರುವ ನನ್ನ ಮಗ, ಮದುವೆ ಮಾಡಿಕೊಳ್ಳಬೇಕೆಂದು ಹಂಬಲಿಸುತ್ತಿರುವುದನ್ನು ಪರಿಗಣಿಸಬೇಕು. ಅದಕ್ಕಾಗಿ ಆತನಿಗೆ 15 ದಿನಗಳ ತುರ್ತು ಪೆರೋಲ್ ನೀಡಲು ಜೈಲಿನ ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಕೋರಿದ್ದರು.
ಈ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ 2025ರ ಸೆಪ್ಟೆಂಬರ್ 24ರಂದು ಪುರಸ್ಕರಿಸಿತ್ತು. ಕರ್ನಾಟಕ ಕಾರಾಗೃಹಗಳು ಮತ್ತು ಸುಧಾರಣಾ ಸೇವಾ ಕೈಪಿಡಿ–2021ರ ಅನುಸಾರ ಪರೋಲ್ ನೀಡುವಂತೆ ಆದೇಶಿಸಿತ್ತು.
‘ಪ್ರತಿ ಮೂರು ದಿನಗಳಿಗೆ ಒಮ್ಮೆ ಸ್ಟೇಷನ್‌ಗೆ ಹೋಗಿ ಸಹಿ ಮಾಡಬೇಕು. ವ್ಯಾಪ್ತಿ ಪ್ರದೇಶ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂಬುದೂ ಸೇರಿದಂತೆ ಅಗತ್ಯ ಷರತ್ತುಗಳೊಂದಿಗೆ ಪೆರೋಲ್ ನೀಡಿ’ ಎಂದು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶಿಸಿತ್ತು.
ಇದರ ಅನುಸಾರ ಹೊರಗೆ ಬಂದ ಪುಟಿಯುವ ರಕ್ತದ ಕೈದಿ ಷರತ್ತುಗಳನ್ನು ಪೂರೈಸಿ ಪಾಣಿಗ್ರಹಣ ಪೂರೈಸಿಕೊಂಡು ಪುನಃ ಜೈಲಿಗೆ ಮರಳಿದ್ದ. ಇತ್ತೀಚೆಗೆ ಈತ ಮತ್ತೊಂದು ಅರ್ಜಿ ಹಾಕಿ ‘ದಾಂಪತ್ಯ ಸಾಂಗತ್ಯ’ದ ಆಧಾರದಲ್ಲಿ ಪೆರೋಲ್ ನೀಡಲು ನಿರ್ದೇಶಿಸುವಂತೆ ಜೈಲಿನ ಅಧಿಕಾರಿಗಳಿಗೆ ಕೋರಿದ್ದ. ಆದರೆ, ಈ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಈತನ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದಳು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕೈದಿಯು ಕಾನೂನಿಗೆ ಅನುಗುಣವಾಗಿ 6 ತಿಂಗಳ ನಂತರ ಪುನಃ ಅರ್ಜಿ ಸಲ್ಲಿಸಬಹುದು’ ಎಂದು ಸೂಚಿಸಿದೆ.
ಪ್ರೇಮದ ಪಾಶ:
ಕೈದಿ ಜೈಲು ಸೇರುವ ಮುನ್ನ ತರುಣಿಯೊಬ್ಬಳ ಬೆನ್ನು ಬಿದ್ದು ಪ್ರೇಮದ ಹುಚ್ಚು ಹೊಳೆಯಲ್ಲಿ ತೇಲುತ್ತಿದ್ದ. ಇದಕ್ಕೆ ತರುಣಿಯ ಅಣ್ಣ ಅಡ್ಡಿಪಡಿಸಿದ್ದ. ಬೇಸತ್ತ ಯುವಕ, ಬಯಸಿದವಳ ಹೃದಯದಲ್ಲಿ ಪರದೇಸಿಯಾದೆ ಎಂಬ ಹತಾಶೆಯಿಂದ 2020ರ ಜೂನ್ 14ರಂದು ತರುಣಿಯ ಕೊಲೆ ಮಾಡಿದ್ದ. ಆರೋಪ ಸಾಬೀತಾದ ಕಾರಣ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 302ರ ಅಡಿಯಲ್ಲಿ ಈಗ ಕಂಬಿಗಳ ನಡುವೆ ಕಂಬನಿಗರೆಯುತ್ತಿದ್ದಾನೆ.
ಈತನ ವಿರುದ್ಧ ನಗರದ 9ನೇ ಎಸಿಎಂಎಂ ಕೋರ್ಟ್‌ನಲ್ಲಿ ಐಪಿಸಿ ಕಲಂ 21 (ಬಿ), 22 (ಬಿ), ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್‌ನ 62ನೇ ಕೋರ್ಟ್‌ನಲ್ಲಿ ಐಪಿಸಿ ಕಲಂ 307 ಮತ್ತು 39ನೇ ಎಸಿಸಿಎಂಎಂ ಕೋರ್ಟ್‌ನಲ್ಲಿ ಐಪಿಸಿ ಕಲಂ 341, 324 504 ಮತ್ತು 506ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಆದರೆ ಇವುಗಳಲ್ಲಿ ಜಾಮೀನು ದೊರೆತಿರುವುದು ಗಮನಾರ್ಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.