ADVERTISEMENT

ಮೊಬೈಲ್ ಕಿತ್ತು ಪರಾರಿ: ಬೆನ್ನಟ್ಟಿದ್ದ ವ್ಯಕ್ತಿಗೆ ಚಾಕು ಇರಿತ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 2:57 IST
Last Updated 14 ನವೆಂಬರ್ 2022, 2:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಯುವತಿಯ ಮೊಬೈಲ್ ಸುಲಿಗೆ ಹಾಗೂ ಡೆಲಿವರಿ ಬಾಯ್‌ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಟೋನಿ (25) ಎಂಬಾತನನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಂಪಂಗಿರಾಮನಗರ ನಿವಾಸಿ ಟೋನಿ, ಅಪರಾಧ ಹಿನ್ನೆಲೆಯುಳ್ಳವ. ಸುಲಿಗೆ ಹಾಗೂ ಹಲ್ಲೆ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಜಯನಗರ 2ನೇ ಹಂತದ ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ವಾಸವಿದ್ದ ಯುವತಿ, ಅ. 18ರಂದು ಮಧ್ಯಾಹ್ನ ರಸ್ತೆಯಲ್ಲಿ ನಡೆದುಕೊಂಡು ಕೆಲಸಕ್ಕೆಂದು ಕಚೇರಿಗೆ ಹೊರಟಿದ್ದರು. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಟೋನಿ ಹಾಗೂ ಸಹಚರ, ಯುವತಿಯನ್ನು ಹಿಂಬಾಲಿಸಿದ್ದರು. ನಡುರಸ್ತೆಯಲ್ಲೇ ಯುವತಿಯನ್ನು ಅಡ್ಡಗಟ್ಟಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು’ ಎಂದು ತಿಳಿಸಿದರು.

ADVERTISEMENT

ಸಹಾಯಕ್ಕೆ ಬಂದ ಡೆಲಿವರಿ ಬಾಯ್: ‘ಯುವತಿ ಸಹಾಯಕ್ಕಾಗಿ ಕೂಗಾಡಿದ್ದರು. ಸಮೀಪದಲ್ಲಿದ್ದ ಡೆಲಿವರಿ ಬಾಯ್ ಸೂರ್ಯ ಸಹಾಯಕ್ಕೆ ಬಂದಿದ್ದರು. ‘ಫೈಂಡ್ ಮೈ ಡಿವೈಸ್’ ತಂತ್ರಜ್ಞಾನದ ಮೂಲಕ ಯುವತಿ ಮೊಬೈಲ್‌ ಲೋಕೇಶನ್ ಪತ್ತೆ ಮಾಡಿದ್ದರು. ನಂತರ, ಆರೋಪಿಗಳನ್ನು ಹುಡುಕುತ್ತ ಹೊರಟಿದ್ದರು’ ಎಂದು ಪೊಲೀಸರು ಹೇಳಿದರು.

‘ಸುಧಾಮನಗರದ ಚಹಾ ಅಂಗಡಿಯೊಂದರ ಮುಂದೆ ಆರೋಪಿಗಳು ನಿಂತುಕೊಂಡಿದ್ದರು. ಸ್ಥಳಕ್ಕೆ ಹೋಗಿದ್ದ ಸೂರ್ಯ, ಯುವತಿಯ ಮೊಬೈಲ್ ಕೊಡುವಂತೆ ಒತ್ತಾಯಿಸಿದ್ದರು. ಅದಕ್ಕೆ ಒಪ್ಪದ ಆರೋಪಿಗಳು, ಸೂರ್ಯ ಜೊತೆ ಜಗಳ ತೆಗೆದು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಸೂರ್ಯ ಅವರನ್ನು ಯುವತಿಯೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಂತರ, ಕೃತ್ಯದ ಬಗ್ಗೆ ಯುವತಿ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.

‘ಮೊಬೈಲ್ ಸುಲಿಗೆ, ಹಲ್ಲೆ ಸಂಬಂಧ ಸಿದ್ದಾಪುರ ಹಾಗೂ ಕಲಾಸಿಪಾಳ್ಯ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಸಿಸಿಟಿವಿ ಕ್ಯಾಮೆರಾ ದೃಶ್ಯ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.