ADVERTISEMENT

ಬೆಂಗಳೂರು– ದಿಂಡಿಗಲ್‌ ಚತುಷ್ಪಥ ರಸ್ತೆ 2022ರ ಜೂನ್‌ಗೆ ಪೂರ್ಣ: ನಿತಿನ್‌ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 19:56 IST
Last Updated 5 ಅಕ್ಟೋಬರ್ 2021, 19:56 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ಬೆಂಗಳೂರು: ‘ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಕನಕಪುರ ರಸ್ತೆಯಿಂದ ಮಳವಳ್ಳಿವರೆಗೆ ಚತುಷ್ಪಥ (ಬೆಂಗಳೂರು– ದಿಂಡಿಗಲ್‌ ರಸ್ತೆ) ಮತ್ತು ಬೈಪಾಸ್‌ ರಸ್ತೆಯ ಕಾಮಗಾರಿ ತ್ವರಿತಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. 2022ರ ಜೂನ್‌ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯ ಅವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಮಾಹಿತಿ ನೀಡಿದ್ದಾರೆ.

ಕಳೆದ ಮಾರ್ಚ್‌ 16ರಂದು ಗಡ್ಕರಿ ಅವರಿಗೆ ಪತ್ರ ಬರೆದಿದ್ದ ಪಿ.ಜಿ. ಆರ್‌. ಸಿಂಧ್ಯ, ‘ಬೆಂಗಳೂರು–ಕನಕ‍ಪುರ–ಬಿಳಿಗಿರಿರಂಗನಬೆಟ್ಟ–ದಿಂಡಿಗಲ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಹಣದ ಕೊರತೆಯಿಂದ ನಿಂತಿದೆ. ರಸ್ತೆ ಕಾಮಗಾರಿ ತ್ವರಿತಗೊಳಿಸಲ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದ್ದರು.

‘ಈ ರಸ್ತೆ ಕಾಮಗಾರಿಯ ಗುತ್ತಿಗೆಯನ್ನು ಸದ್ಭವ್‌ ಬೆಂಗಳೂರು ಹೈವೇ ಪ್ರೈವೇಟ್‌ ಕಂಪನಿ ವಹಿಸಿಕೊಂಡಿದ್ದು, ಕಂಪನಿ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಮತ್ತು ಮೂಲಸೌಲಭ್ಯಗಳ ಸ್ಥಳಾಂತರ ವಿಳಂಬ ಆಗಿದ್ದರಿಂದ ಇಡೀ ಯೋಜನೆ ಅನುಷ್ಠಾನ ವಿಳಂಬವಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಈ ಯೋಜನೆಯ ಮೇಲೆ ನಿಗಾ ಇಟ್ಟಿದ್ದು, ಹಣದ ಹರಿವಿನ ಬಗ್ಗೆಯೂ ಕ್ರಮ ವಹಿಸಲಿದೆ’ ಎಂದು ಸಿಂಧ್ಯ ಅವರಿಗೆ ಬರೆದ ಪತ್ರದಲ್ಲಿ ಗಡ್ಕರಿ ತಿಳಿಸಿದ್ದಾರೆ.

ADVERTISEMENT

ಈ ರಸ್ತೆ ಬಿಆರ್‌ಟಿ ಹುಲಿ ಮೀಸಲು ಗಡಿಯಿಂದ ಬೆಂಗಳೂರುವರೆಗೆ (ನೈಸ್‌ ಜಂಕ್ಷನ್‌) 170.92 ಕಿ.ಮೀ ಉದ್ದವಿದೆ. ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಕಂಪನಿಗೆ 2017ರ ಆಗಸ್ಟ್‌ 21ರಂದು ಕಾರ್ಯಾದೇಶ ನೀಡಲಾಗಿದೆ. ಈವರೆಗೆ ಶೇ 79ರಷ್ಟು ಪ್ರಗತಿ ಆಗಿದೆ ಎಂದೂ ಪತ್ರದಲ್ಲಿ ಗಡ್ಕರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.