ಬೆಂಗಳೂರು: ರಾಜ್ಯದಲ್ಲಿ ಅಂಗಾಂಗಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಈ ವರ್ಷ ಈವರೆಗೆ 121 ಮಂದಿ ಅಂಗಾಂಗ ದಾನ ಮಾಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಮಂದಿ ಅಂಗಾಂಗಕ್ಕೆ ಕಾಯುತ್ತಿದ್ದು, ಮೂತ್ರಪಿಂಡಕ್ಕೆ ಹೆಚ್ಚಿನ ಬೇಡಿಕೆಯಿದೆ.
ಆರೋಗ್ಯ ಇಲಾಖೆಯ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯು (ಜೀವಸಾರ್ಥಕತೆ) ಶುಕ್ರವಾರದಂದು ಅಂಗಾಂಗ ದಿನ ಆಚರಿಸುತ್ತಿದೆ. ಈ ಸಂಬಂಧ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಅಂಗಾಂಗ ದಾನದ ಪ್ರತಿಜ್ಞೆ ಕೈಗೊಳ್ಳುವಂತೆ ಮನವಿ ಮಾಡಿದೆ.
‘ಅಂಗಾಂಗ ಕಸಿ ಸ್ವೀಕರಿಸುವವರು ಮತ್ತು ಅಂಗಾಂಗ ದಾನದ ಪ್ರತಿಜ್ಞೆ ಕೈಗೊಳ್ಳುವವರ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ವ್ಯಕ್ತಿಯು ಬದುಕಿದ್ದಾಗಲೇ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಬಹುದು. 2025ರ ಜುಲೈ 30ರ ವೇಳೆಗೆ ರಾಜ್ಯದಲ್ಲಿ 43,221 ಮಂದಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ರಾಜ್ಯವು ರಾಷ್ಟ್ರ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯು ರಾಜ್ಯದಲ್ಲಿಯೇ ಅಂಗಾಂಗ ದಾನದ ಪ್ರತಿಜ್ಞೆಯಲ್ಲಿ ಮುಂಚೂಣಿಯಲ್ಲಿದ್ದು, ಅಲ್ಲಿನ 11,186 ಮಂದಿ ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ್ದಾರೆ’ ಎಂದು ಸಂಸ್ಥೆ ತಿಳಿಸಿದೆ.
8 ಜೀವ ಉಳಿಸಲು ಸಾಧ್ಯ: ‘ರಾಜ್ಯದಲ್ಲಿ ಅಂಗಾಂಗ ಮತ್ತು ಅಂಗಾಂಶಗಳ ತೀವ್ರ ಕೊರತೆಯಿದೆ. ಒಬ್ಬ ವ್ಯಕ್ತಿಯು ಅಂಗಾಂಗ ದಾನದ ಮೂಲಕ ಎಂಟು ಜೀವವನ್ನು ಉಳಿಸಬಹುದಾಗಿದೆ. ಹೃದಯ, ಮೂತ್ರಪಿಂಡಗಳು, ಪಿತ್ತಜನಕಾಂಗ, ಮೇದೋಜೀರಕ ಗ್ರಂಥಿ, ಸಣ್ಣ ಕರುಳು ಮತ್ತು ಶ್ವಾಸಕೋಶವನ್ನು ದಾನ ಮಾಡಬಹುದು. ಅಂಗಾಂಶದ ಮೂಲಕ 50ಕ್ಕೂ ಹೆಚ್ಚು ಮಂದಿಗೆ ನೆರವಾಗಬಹುದು’ ಎಂದು ಹೇಳಿದೆ.
‘ಅಂಗಾಂಗ ದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಅಂಗಾಂಗ ದಾನಕ್ಕೆ ಸಂಬಂಧಿಸಿದ ಮೂಢನಂಬಿಕೆಗಳು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಮಿದುಳು ನಿಷ್ಕ್ರಿಯಗೊಂಡ ನಂತರ ಅಂಗಾಂಗಗಳು ಮತ್ತು ಅಂಗಾಂಶಗಳನ್ನು ದಾನ ಮಾಡಿದ ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಪ್ರಶಂಸಾ ಪತ್ರ ವಿತರಿಸಲಾಗುತ್ತಿದೆ. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ದಾನಿಯ ಕುಟುಂಬದ ಸದಸ್ಯರನ್ನು ಗೌರವಿಸಲಾಗುತ್ತಿದೆ’ ಎಂದು ಸಂಸ್ಥೆ ತಿಳಿಸಿದೆ.
ವಿವರಕ್ಕೆ: www.jeevasarthakathe.karnataka.gov.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.