ADVERTISEMENT

ಉಕ್ಕಿನ ಸೇತುವೆಗೆ ಮತ್ತೆ ಜೀವಕೊಟ್ಟ ಪರಮೇಶ್ವರ

ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ:ಬೆಂಗಳೂರು ಅಭಿವೃದ್ಧಿ ಸಚಿವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 20:02 IST
Last Updated 1 ಜನವರಿ 2019, 20:02 IST
   

ಬೆಂಗಳೂರು: ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಭರ್ಜರಿ ‘ಕಿಕ್‌ ಬ್ಯಾಕ್‌’ ಸಲ್ಲಿಕೆಯಾಗಿದೆ ಎಂಬ ಗಂಭೀರ ಆರೋಪ ಎದುರಾದ ಕಾರಣಕ್ಕೆ ಕೈ ಬಿಡಲಾಗಿದ್ದ ಉಕ್ಕಿನ ಸೇತುವೆ ಯೋಜನೆಗೆ ಮತ್ತೆ ಜೀವ ಕೊಡಲು ಹಾಲಿ ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಮುಂದಾಗಿದ್ದಾರೆ.

ಅಂದು ವಿರೋಧ ಪಕ್ಷದಲ್ಲಿದ್ದ ಈಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಇದೇ ಮಾದರಿಯ ಆರೋಪ ಮಾಡಿದ್ದರು. ಈಗ ಅವರ ನೇತೃತ್ವದ ಸರ್ಕಾರ ಮತ್ತೆ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವುದು ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ.

ಚಾಲುಕ್ಯ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್‌ವರೆಗೆ ₹2,200 ಕೋಟಿ ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಿಸಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಪರಿಸರವಾದಿಗಳು, ಸಾಮಾಜಿಕ ಹೋರಾಟಗಾರರ ತೀವ್ರ ವಿರೋಧವೂ ವ್ಯಕ್ತವಾಗಿತ್ತು.

ADVERTISEMENT

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉಕ್ಕಿನ ಸೇತುವೆ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಈ ಯೋಜನೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಪ್ರಕಟಿಸಿದರು.

‘ಕೆಲವರು ರಾಜಕೀಯವಾಗಿ ಇದನ್ನು ವಿರೋಧಿಸಿದ್ದರು. ಹೀಗಾಗಿ ಯೋಜನೆ ಅರ್ಧಕ್ಕೆ ನಿಂತಿತ್ತು. ಪ್ರಸ್ತುತ ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರ ಮುಂದೆ ತೆರೆದಿಡಲಾಗುತ್ತದೆ. ಯೋಜನೆಯ ಉದ್ದೇಶ, ಇದರ ವೆಚ್ಚ, ಇದರ ಉಪಯೋಗ ಎಲ್ಲವೂ ಕೂಡ ಜನರಿಗೆ ತಿಳಿಸಿ ಅವರ ಅಭಿಪ್ರಾಯ ಆಹ್ವಾನಿಸುತ್ತೇವೆ. ನಂತರದಲ್ಲಿಯೇ ಯೋಜನೆಯ ಅನುಷ್ಠಾನದ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ’ ಎಂದರು.

‘ಚಾಲುಕ್ಯ ವೃತ್ತದಿಂದ ವಿಮಾನ ನಿಲ್ದಾಣಕ್ಕೆ ತಲುಪಲು 45 ನಿಮಿಷಕ್ಕೂ ಹೆಚ್ಚು ಕಾಲಾವಕಾಶ ಬೇಕು. ಈ ಯೋಜನೆಯಿಂದ ಕೇವಲ 20 ನಿಮಿಷದಲ್ಲೇ ವಿಮಾನ ನಿಲ್ದಾಣ ತಲುಪಬಹುದು. ಈ ಯೋಜನೆಯಲ್ಲಿ ಏನೇ ನ್ಯೂನತೆ ಇದ್ದರೂ ಸರಿಪಡಿಸಲು ಸಿದ್ಧ’ ಎಂದರು.

ಯೋಜನೆ ಕೈಬಿಟ್ಟಿದ್ದ ಕಾಂಗ್ರೆಸ್ ಸರ್ಕಾರ: ₹2,200 ಕೋಟಿ ವೆಚ್ಚದಲ್ಲಿ 6.5 ಕಿ.ಮೀ. ಉದ್ದದ ಸೇತುವೆ ನಿರ್ಮಾಣಕ್ಕೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ 2016ರ ಅಕ್ಟೋಬರ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಯೋಜನೆಗೆ ಪರಿಸರವಾದಿಗಳು ಹಾಗೂ ನಾಗರಿಕರು ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು. ಇದರಿಂದ ಸಂಚಾರ ದಟ್ಟಣೆ ಪರಿಹಾರ ಆಗುವುದಿಲ್ಲ ಎಂದು ಪ್ರತಿಪಾದಿಸಿದ್ದರು.

‘ಉಕ್ಕಿನ ಸೇತುವೆ ಗುತ್ತಿಗೆದಾರರು ಸಿದ್ದರಾಮಯ್ಯ ಕುಟುಂಬದವರಿಗೆ ನೇರವಾಗಿ ₹65 ಕೋಟಿ ತಲುಪಿಸಿದ್ದಾರೆ ಎಂಬ ಮಾಹಿತಿ ಗೋವಿಂದರಾಜ್‌ ಡೈರಿಯಲ್ಲಿ ಉಲ್ಲೇಖವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಪಾದನೆ ಮಾಡಿದ್ದರು.

ಉಕ್ಕಿನ ಸೇತುವೆ ಯೋಜನೆ ಕೈಬಿಡಲಾಗಿದೆ ಎಂದು ರಾಜ್ಯ ಸರ್ಕಾರ 2017ರ ಮಾರ್ಚ್‌ನಲ್ಲಿ ಪ್ರಕಟಿಸಿತ್ತು. ‘ಜನಹಿತ ಹಾಗೂ ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಜನರಿಗೇ ಬೇಡವಾಗಿದೆ. ಸುಖಾಸುಮ್ಮನೆ ಭ್ರಷ್ಟಾಚಾರದ ಆಪಾದನೆ ಹೊತ್ತುಕೊಂಡು ಅನುಷ್ಠಾನ ಮಾಡುವುದು ಬೇಡ ಎಂಬ ಕಾರಣಕ್ಕೆ ಈ ಯೋಜನೆ ಕೈಬಿಡಲಾಗಿದೆ’ ಎಂದೂ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಹೇಳಿದ್ದರು.

ಯೋಜನೆ ಕೈಬಿಟ್ಟಿದ್ದ ಕಾಂಗ್ರೆಸ್ ಸರ್ಕಾರ: ₹1,800 ಕೋಟಿ ವೆಚ್ಚದಲ್ಲಿ 6.5 ಕಿ.ಮೀ. ಉದ್ದದ ಸೇತುವೆ ನಿರ್ಮಾಣಕ್ಕೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ 2016ರ ಅಕ್ಟೋಬರ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ಯೋಜನೆಗೆ ಪರಿಸರವಾದಿಗಳು ಹಾಗೂ ನಾಗರಿಕರು ಸರಣಿ ಪ್ರತಿಭಟನೆಗಳನ್ನು ನಡೆಸಿದ್ದರು. ಇದರಿಂದ ಸಂಚಾರ ದಟ್ಟಣೆ ಪರಿಹಾರ ಆಗುವುದಿಲ್ಲ ಎಂದೂ ಪ್ರತಿಪಾದಿಸಿದ್ದರು.

‘ಉಕ್ಕಿನ ಸೇತುವೆ ಗುತ್ತಿಗೆದಾರರು ಸಿದ್ದರಾಮಯ್ಯ ಕುಟುಂಬದವರಿಗೆ ನೇರವಾಗಿ ₹65 ಕೋಟಿ ತಲುಪಿಸಿದ್ದಾರೆ ಎಂಬ ಮಾಹಿತಿ ಗೋವಿಂದರಾಜ್‌ ಡೈರಿಯಲ್ಲಿ ಉಲ್ಲೇಖವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಪಾದನೆ ಮಾಡಿದ್ದರು.

ಉಕ್ಕಿನ ಸೇತುವೆ ಯೋಜನೆ ಕೈಬಿಡಲಾಗಿದೆ ಎಂದು ರಾಜ್ಯ ಸರ್ಕಾರ 2017ರ ಮಾರ್ಚ್‌ನಲ್ಲಿ ಪ್ರಕಟಿಸಿತ್ತು. ‘ಜನಹಿತ ಹಾಗೂ ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಜನರಿಗೇ ಬೇಡವಾಗಿದೆ. ಸುಖಾಸುಮ್ಮನೆ ಭ್ರಷ್ಟಾಚಾರದ ಆಪಾದನೆ ಹೊತ್ತುಕೊಂಡು ಅನುಷ್ಠಾನ ಮಾಡುವುದು ಬೇಡ ಎಂಬ ಕಾರಣಕ್ಕೆ ಈ ಯೋಜನೆ ಕೈಬಿಡಲಾಗಿದೆ’ ಎಂದೂ ಆಗ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದ ಕೆ.ಜೆ.ಜಾರ್ಜ್‌ ಹೇಳಿದ್ದರು.

ಉಕ್ಕಿನ ಸೇತುವೆ ನಿರ್ಮಿಸಿದರೆ ‘ಹಣ’!

ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ₹ 1,800 ಕೋಟಿ ಖರ್ಚು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಬಳಿ ರೈತರಿಗೆ ಪರಿಹಾರ ನೀಡಲು ಹಣವೇ ಇಲ್ಲ. ಸರ್ಕಾರದ ಉತ್ಸಾಹ ಅರ್ಥವಾಗುವಂಥದ್ದೆ. ಉಕ್ಕಿನ ಸೇತುವೆ ನಿರ್ಮಿಸಿದರೆ ಅದರಲ್ಲಿ ಇವರಿಗೂ ಹಣ ಸಿಗುತ್ತದೆ, ಹೈಕಮಾಂಡ್‌ಗೂ ತಲುಪಿಸಬಹುದು. ರೈತರಿಗೆ ಪರಿಹಾರ ನೀಡಿದರೆ ಇವರಿಗೇನು ಉಳಿಯುತ್ತದೆ? ಹೀಗಾಗಿ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಉಕ್ಕಿನ ಸೇತುವೆ ಯೋಜನೆಗೆ ಮುಂದಾಗಿದ್ದಾರೆ.

ಜನರ ವಿರೋಧದ ನಡುವೆಯೂ ಈ ಯೋಜನೆಗೆ ಸರ್ಕಾರ ಉತ್ಸಾಹ ತೋರುತ್ತಿದೆ. ವಿರೋಧವನ್ನು ಆಲಿಸದೆ ಮೊಂಡುತನ ಪ್ರದರ್ಶಿಸುತ್ತಿದೆ. ಈ ಯೋಜನೆಗೆ ನನ್ನ ವಿರೋಧವಿದೆ. ಇವರಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು? ಇದೇ ಕಾಳಜಿ, ಬದ್ಧತೆ, ಉತ್ಸಾಹವನ್ನು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತತ್ತರಿಸಿರುವ ರೈತರ ವಿಷಯದಲ್ಲಿ ತೋರಿಸಲಿ.

ಎಚ್‌.ಡಿ.ಕುಮಾರಸ್ವಾಮಿ, 2016ರ ಅಕ್ಟೋಬರ್‌ 16ರಂದು. ಮೈಸೂರಿನಲ್ಲಿ ಹೇಳಿಕೆ

ಬಿಜೆಪಿ ವಿರೋಧ

‘ಯೋಜನೆಯ ಸಾಧಕ ಬಾಧಕಗಳ ಕುರಿತು ಸಮಾಲೋಚನೆ ನಡೆಸದೆ ತರಾತುರಿಯಲ್ಲಿ ಪರಮೇಶ್ವರ ಹೇಳಿಕೆ ನೀಡುವ ಅಗತ್ಯ ಏನಿತ್ತು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಕ್ಕಿನ ಸೇತುವೆಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಜನರು ಭಾರಿ ಪ್ರತಿಭಟನೆಗಳನ್ನು ನಡೆಸಿದ್ದರು. ಇದು ಜನರಿಗೆ ಬೇಡವಾದ ಯೋಜನೆ. ಯೋಜನೆ ಪ್ರಕಟಿಸುವ ಮುನ್ನ ಸಮಾಲೋಚನೆ ನಡೆಸಬೇಕಿತ್ತು. ವಿಧಾನಮಂಡಲ ಅಧಿವೇಶನದಲ್ಲೂ ಚರ್ಚೆ ನಡೆಸಬೇಕಿತ್ತು’ ಎಂದರು.

ಬಿಜೆಪಿಯವರು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ: ಶಿವಕುಮಾರ್‌ ಪ್ರಶ್ನೆ

ಉಕ್ಕಿನ ಸೇತುವೆ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ‘ಕಪ್ಪ ಕಾಣಿಕೆ ಬಗ್ಗೆ ಆರೋಪ ಮಾಡುತ್ತಿರುವ ಬಿಜೆಪಿಯವರು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ’ ಎಂದು ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನರ ಮಾತಿಗೆ ಬೆಲೆ ಕೊಟ್ಟು ಸಿದ್ದರಾಮಯ್ಯ ಯೋಜನೆ ರದ್ದು ಮಾಡಿದ್ದರು. ಅವರೇನೂ ತಪ್ಪು ಮಾಡಿರಲಿಲ್ಲ. ಬಿಜೆಪಿಯವರಿಗೆ ಬೆಳಿಗ್ಗೆ ಹಾಗೂ ಸಂಜೆ ಆರೋಪ ಮಾಡುವುದೇ ಅಭ್ಯಾಸವಾಗಿದೆ’ ಎಂದು ಟೀಕಿಸಿದರು.

‘ಯೋಜನೆ ಕುರಿತು ಬಿಜೆಪಿಯವರು ಸಲಹೆ ಸೂಚನೆ ನೀಡಲಿ. ಅದಕ್ಕೆ ನಮ್ಮ ತಕರಾರು ಇಲ್ಲ. ಅದು ಬಿಟ್ಟು ಬ್ಲ್ಯಾಕ್‌ಮೇಲ್‌ ಮಾಡುವುದು ಸರಿಯಲ್ಲ. ಅದಕ್ಕೆಲ್ಲ ನಾವು ಹೆದರುವುದಿಲ್ಲ. ನಾವು ತಪ್ಪು ಮಾಡಿದರೆ ಗಲ್ಲಿಗೆ ಹಾಕಲಿ’ ಎಂದು ಹೇಳಿದರು.

‘ನಗರದ ಉತ್ತರ ಭಾಗಕ್ಕೆ ಹೋಗಿ ಬರುವುದು ಎಷ್ಟು ಕಷ್ಟ ಎಂಬುದು ಗೊತ್ತು. ಸದಾಶಿವನಗರದ ನನ್ನ ಮನೆಗೆ ಹೋಗಿ ಬರಲು 45 ನಿಮಿಷಗಳು ಬೇಕು. ಸಂಚಾರ ದಟ್ಟಣೆಯಿಂದ ಜನರಿಗೆ ಉದ್ಯೋಗ ಸ್ಥಳಕ್ಕೆ ಸಕಾಲದಲ್ಲಿ ತೆರಳಲು ಆಗುತ್ತಿಲ್ಲ. ಅನಗತ್ಯ ಸಮಯ ವ್ಯರ್ಥ ಆಗುತ್ತಿದೆ. ಜನರಿಗೆ ಅನುಕೂಲ ಕಲ್ಪಿಸಲು ಯೋಜನೆ ಅನುಷ್ಠಾನ ಮಾಡುತ್ತೇವೆ’ ಎಂದರು.

ಆಗ ಪರಮೇಶ್ವರ ಹೇಳಿದ್ದೇನು?

ಯೋಜನೆಯನ್ನು ಬೆಂಗಳೂರು ಜನರೇ ಬೇಡ ಎಂದಿದ್ದಾರೆ. ಅವರಿಗೆ ಬೇಡವಾದರೆ ಸರ್ಕಾರಕ್ಕೂ ಬೇಡ. ಬಿಜೆಪಿ ಆರೋಪಕ್ಕೆ ಹೆದರಿ ಈ ಯೋಜನೆ ಕೈಬಿಟ್ಟಿದ್ದಲ್ಲಎಂದು 2017ರಲ್ಲಿ ಪರಮೇಶ್ವರ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.