ADVERTISEMENT

ಸಂತ ಸೇವಾಲಾಲ್‌ ಜಯಂತಿ ವೆಚ್ಚ: ತನಿಖೆಗೆ ಬಂಜಾರ ಸಮುದಾಯದ ಸಂಘಟನೆಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 16:06 IST
Last Updated 17 ಜನವರಿ 2026, 16:06 IST
   

ಬೆಂಗಳೂರು: ಹೊನ್ನಾಳಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿ ಪ್ರತಿ ವರ್ಷ ನಡೆಯುವ ಸಂತಸೇವಾಲಾಲ್‌ ಜಯಂತ್ಯುತ್ಸವದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಶಂಕೆ ಇದ್ದು, ಕೋವಿಡ್‌ ನಂತರ ನಡೆದ ಎಲ್ಲ ಉತ್ಸವಗಳ ಹಣಕಾಸಿನ ನಿರ್ವಹಣೆಯನ್ನು ತನಿಖೆಗೆ ಒಳಪಡಿಸಬೇಕು ಎಂದು ಬಂಜಾರ ಸಮುದಾಯದ ಸಂಘಟನೆಗಳು ಒತ್ತಾಯಿಸಿವೆ. 

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರಿಗೆ ದೂರು ನೀಡಿರುವ ಕರ್ನಾಟಕ ಬಂಜಾರ ಬ್ರಿಗೇಡ್‌, ‘ಸಂತ ಸೇವಾಲಾಲ್‌ ಅವರು ಜನಿಸಿದ ಪುಣ್ಯಭೂಮಿಯಲ್ಲಿ ಪ್ರತಿ ವರ್ಷ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಮೂರು ದಿನಗಳು ನಡೆಯುವ ಕಾರ್ಯಕ್ರಮಕ್ಕೆ ರಾಜ್ಯ, ಹೊರರಾಜ್ಯಗಳಿಂದ ನಾಲ್ಕೈದು ಲಕ್ಷ ಭಕ್ತರು ಭಾಗವಹಿಸುತ್ತಾರೆ. ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರವೇ ಸಂಪೂರ್ಣ ಅನುದಾನ ನೀಡುತ್ತಿದೆ. ಆದರೆ, ಪ್ರತಿ ವರ್ಷವೂ ಅಧಿಕ ಖರ್ಚು ತೋರಿಸುತ್ತಿರುವುದು ಹಣ ದುರ್ಬಳಕೆಯ ಶಂಕೆ ಮೂಡಿಸಿದೆ’ ಎಂದು ದೂರಿದೆ.

2025ರಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಮಾರುಕಟ್ಟೆ ಸಂವಹನ ಮತ್ತು ಜಾಹಿರಾತು ಸಂಸ್ಥೆಯ ಮೂಲಕ ₹5 ಕೋಟಿ ನೀಡಿತ್ತು. ಆದರೆ, ₹4.19 ಕೋಟಿ ಹೆಚ್ಚುವರಿ ಖರ್ಚು ನೀಡಲು ಸಮಾಜಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ದಾವಣಗೆರೆ ಜಿಲ್ಲಾಡಳಿತ ₹1.14 ಕೋಟಿ, ತಾಂಡಾ ಅಭಿವೃದ್ಧಿ ನಿಗಮ ₹26.05 ಲಕ್ಷ ನೀಡಿವೆ. ಬರುವ ಫೆ. 13ರಿಂದ 15ರವರೆಗೆ ನಡೆಯುವ ಜಯಂತಿ ಕಾರ್ಯಕ್ರಮಕ್ಕೂ ₹10 ಕೋಟಿ ಬೇಡಿಕೆ ಇಡಲಾಗಿದೆ. ಶಾಮಿಯಾನ, ಊಟೋಪಚಾರ, ಸಾಮಗ್ರಿ ಖರೀದಿ, ಸಾರಿಗೆ ಭತ್ಯೆ ಸೇರಿದಂತೆ ಎಲ್ಲೂ ಪಾರದರ್ಶಕತೆ ಉಳಿಸಿಕೊಂಡಿಲ್ಲ. ಹಾಗಾಗಿ, ಕಾರ್ಯಕ್ರಮದ ಆಯೋಜನೆ, ವೆಚ್ಚದ ಸಂಪೂರ್ಣ ಹೊಣೆಯನ್ನು ದಾವಣಗೆರೆ ಜಿಲ್ಲಾಡಳಿತಕ್ಕೆ ವಹಿಸಬೇಕು ಎಂದು ಒತ್ತಾಯಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.