ADVERTISEMENT

ಪಟ್ಟೆ ತಲೆಯ ಹೆಬ್ಬಾತು ಕುಂದವಾಡದಿಂದ ವಿಮುಖ

ಗದಗದ ಮಾಗಡಿ ಕೆರೆಯಲ್ಲಿ ಹೋದವರ್ಷಕ್ಕಿಂತ ಸುಮಾರು 3,000 ಹಕ್ಕಿಗಳ ಹೆಚ್ಚಳ

ವಿಶಾಖ ಎನ್.
Published 28 ಡಿಸೆಂಬರ್ 2019, 20:49 IST
Last Updated 28 ಡಿಸೆಂಬರ್ 2019, 20:49 IST
ಇದೇ ವರ್ಷದ ಆರಂಭದಲ್ಲಿ ದಾವಣಗೆರೆಯ ಕೊಂಡಜ್ಜಿ ಕೆರೆಯಲ್ಲಿ ಕಂಡುಬಂದಿದ್ದ ನೂರಾರು ಪಟ್ಟೆ ತಲೆಯ ಬಾತುಗಳು   –ಪ್ರಜಾವಾಣಿ ಚಿತ್ರ
ಇದೇ ವರ್ಷದ ಆರಂಭದಲ್ಲಿ ದಾವಣಗೆರೆಯ ಕೊಂಡಜ್ಜಿ ಕೆರೆಯಲ್ಲಿ ಕಂಡುಬಂದಿದ್ದ ನೂರಾರು ಪಟ್ಟೆ ತಲೆಯ ಬಾತುಗಳು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕುಂದವಾಡ ಕೆರೆಗೆ ಪ್ರತಿವರ್ಷ ಮಂಗೋಲಿಯಾದಿಂದ ಬರುತ್ತಿದ್ದ ಪಟ್ಟೆ ತಲೆಯ ಹೆಬ್ಬಾತು (ಬಾರ್ ಹೆಡೆಡ್ ಗೀಸ್) ಈ ಬಾರಿ ಬಂದಿಲ್ಲ.

ಸಾಮಾನ್ಯವಾಗಿ ನವೆಂಬರ್ 22, 23ರಂದು ಈ ಹಕ್ಕಿಗಳು ವಲಸೆ ಬರುತ್ತವೆ. 2014ರಲ್ಲಿ ಕುಂದವಾಡ ಕೆರೆಗೆ 430 ಹಕ್ಕಿಗಳು ಬಂದಿದ್ದವು. 2015ರಲ್ಲಿ 265, 2016ರಲ್ಲಿ 160, 17ರಲ್ಲಿ 45 ಹೀಗೆ ಇಳಿಮುಖವಾಗುತ್ತಾ ಬಂದು, ಕಳೆದ ವರ್ಷ ಕೇವಲ 10 ಹಕ್ಕಿಗಳು ಬಂದಿದ್ದವು. ಕೊಂಡಜ್ಜಿ ಕೆರೆಯಲ್ಲಿ ಒಂದಿಷ್ಟು ಹಕ್ಕಿಗಳು ಕಂಡುಬಂದಿದ್ದವು. ಈ ವರ್ಷ ಒಂದೂ ಬಾರದೇ ಇರುವುದು ಪಕ್ಷಿಪ್ರಿಯರಲ್ಲಿ ಬೇಸರ ಮೂಡಿಸಿದೆ.

‘ಕುಂದವಾಡ ಕೆರೆಗೆ ಹೊಂದಿಕೊಂಡ ಪ್ರದೇಶದಲ್ಲಿ ವರ್ಷಗಳ ಹಿಂದೆ ನಿವೇಶನಗಳನ್ನು ಮಾಡುವ ಕಾಮಗಾರಿ ಅವ್ಯಾಹತವಾಗಿ ನಡೆದಿತ್ತು. ಆಮೇಲೆ ಗಾಜಿನಮನೆ ನಿರ್ಮಾಣವಾಯಿತು. ಅದರಿಂದ ಹೊಮ್ಮುವ ಬೆಳಕಿನ ಪ್ರತಿಫಲನದಿಂದಾಗಿ ಹಕ್ಕಿಗಳು ಬರುವುದನ್ನು ನಿಲ್ಲಿಸಿರಬೇಕು’ ಎಂದು ದಾವಣಗೆರೆಯ ಪಕ್ಷಿತಜ್ಞ ಡಾ.ಎಸ್. ಶಿಶುಪಾಲ ಕಾರಣ ನೀಡಿದರು.

ADVERTISEMENT

ಪಟ್ಟೆ ತಲೆಯ ಬಾತು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುವುದು ಗದಗಿನ ಮಾಗಡಿ ಕೆರೆಗೆ. ಅದನ್ನು ಬಿಟ್ಟರೆ ಕಬಿನಿ, ತುಂಬಾ ಹಿನ್ನೀರಿನ ಪ್ರದೇಶಗಳಿಗೂ ಬರುತ್ತವೆ. ಮಂಗೋಲಿಯಾದಿಂದ 4,990 ಕಿ.ಮೀ. ದೂರ ಕ್ರಮಿಸಿ ಕೇವಲ 8 ದಿನಗಳಲ್ಲಿ ಅವು ದಾವಣಗೆರೆ ತಲುಪುತ್ತಿದ್ದವು. ಇವು ಹೊಲದಲ್ಲಿ ಬೆಳೆದ ಧಾನ್ಯವನ್ನು ರಾತ್ರಿ ಹೊತ್ತು ತಿಂದು, ಬೆಳಿಗ್ಗೆ ನೀರಿನಲ್ಲಿ ವಿರಮಿಸುತ್ತವೆ. ಮಾರ್ಚ್ ಹೊತ್ತಿಗೆ ಹಿಮಾಲಯದ ಟಿಬೆಟ್‌ನತ್ತ ಮರಳುತ್ತವೆ ಎಂದು ಶಿಶುಪಾಲ ಮಾಹಿತಿ ಕೊಟ್ಟರು.

‘ಈ ಸಲ ಜಲಮೂಲಗಳಲ್ಲಿ ನೀರು ಚೆನ್ನಾಗಿದೆ. ಆದರೆ, ಪಟ್ಟೆ ತಲೆಯ ಬಾತು ಕಲುಷಿತ ನೀರು ಹಾಗೂ ಶಬ್ದಮಾಲಿನ್ಯ ಇರುವ ಕಡೆಯಿಂದ ವಿಮುಖವಾಗುತ್ತದೆ ಎನಿಸುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿಯ ಪಕ್ಷಿತಜ್ಞ ಹರ್ಷವರ್ಧನ.

ಎವರೆಸ್ಟ್‌ ದಾಟಿ ಬರುವ ಹಕ್ಕಿ
‘ಪಟ್ಟೆ ತಲೆಯ ಬಾತಿನ ಕಣ್ಣು ಹಾಗೂ ಕೊಕ್ಕಿನ ತುದಿಯ ಭಾಗದಲ್ಲಿ ‘ಮ್ಯಾಗ್ನೆಟೊ ಪ್ರೊಟೀನ್’ನ ಅಂಶ ಇದೆ. ಇದು ಕಂಪಾಸ್‌ನಂತೆ ಕೆಲಸ ಮಾಡುತ್ತೆ. ಹೀಗಾಗಿ ದಿಕ್ಕನ್ನು ಗುರುತು ಹಿಡಿದು ಹಕ್ಕಿಗಳು ಬರುತ್ತವೆ. ಮಂಗೋಲಿಯಾ ವನ್ಯಜೀವಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ಬ್ಯಾಟ್‌ಬೇಯರ್‌ ಅವರನ್ನು ವರ್ಷಗಳ ಹಿಂದೆ ಸಂಪರ್ಕಿಸಿದ್ದೆ. ಕೆಲವು ಹಕ್ಕಿಗಳಿಗೆ ಅವರು ನಂಬರ್‌ ಇರುವ ಪಟ್ಟಿ ಹಾಕಿ ಕಳುಹಿಸಿದ್ದರು. ಎಕ್ಸ್‌90 ಎಂಬ ಸಂಖ್ಯೆ ಇದ್ದ ಹಕ್ಕಿ ದಾವಣಗೆರೆಗೆ ಆಗ ಬಂದಿತ್ತು. 2,500 ಅಡಿಗಿಂತ ಎತ್ತರದಲ್ಲಿ ಹಾರಬಲ್ಲ ಇವು ಮೌಂಟ್‌ ಎವರೆಸ್ಟ್‌ ಅನ್ನೇ ದಾಟಿಕೊಂಡು ಬರುವುದು ವಿಶೇಷ’ ಎಂದು ಶಿಶುಪಾಲ ಹಕ್ಕಿಯ ಕುರಿತು ಮಾಹಿತಿ ನೀಡಿದರು.

*
ಮಾಗಡಿ ಕೆರೆಯಲ್ಲಿ ಈ ಬಾರಿ ಸುಮಾರು 9,000 ಹಕ್ಕಿಗಳು ವಲಸೆ ಬಂದಿವೆ. ಕಳೆದ ಬಾರಿಗೆ ಹೋಲಿಸಿದರೆ 3,000ದಷ್ಟು ಸಂಖ್ಯೆ ಹೆಚ್ಚಾಗಿದೆ. ಕಳೆದ ಸಲಕ್ಕಿಂತ ಈ ಬಾರಿ ಕೆರೆಯಲ್ಲಿ ನೀರು ಹೆಚ್ಚಿದೆ.
–ಸೋಮಣ್ಣ ಪಶುಪತಿಹಾಳ, ಅರಣ್ಯ ರಕ್ಷಕ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.