ADVERTISEMENT

ಹಂಪಿ ಕನ್ನಡ ವಿ.ವಿ ಸಮಸ್ಯೆ ಪರಿಹರಿಸಲು ಬರಗೂರು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2021, 3:38 IST
Last Updated 19 ಡಿಸೆಂಬರ್ 2021, 3:38 IST
ಪ್ರೊ.ಬರಗೂರು ರಾಮಚಂದ್ರಪ್ಪ
ಪ್ರೊ.ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ಹಂಪಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ವಿವಾದಗಳನ್ನು ಪರಿಹರಿಸಿ, ಅಗತ್ಯವಿರುವ ಅನುದಾನ ಒದಗಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿದ್ದಾರೆ.

‘ಕನ್ನಡ ವಿಶ್ವವಿದ್ಯಾಲಯವು ಇತ್ತೀಚಿನ ದಿನಗಳಲ್ಲಿವೈಯಕ್ತಿಕ ಮತ್ತು ಸಾಂಸ್ಥಿತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದೆ. ಇದು ಕನ್ನಡ ಸಾಂಸ್ಕೃತಿಕ ಲೋಕವು ತಲೆ ತಗ್ಗಿಸುವಂತೆ ಮಾಡಿದೆ. ನಿತ್ಯವೂ ವಿವಾದದಿಂದ ವಿಶ್ವವಿದ್ಯಾಲಯದ ಘನತೆ ಕುಸಿಯುತ್ತಿದೆ. ವಿವಾದಿತ ವಿದ್ಯಮಾನಗಳನ್ನು ಪರಿಶೀಲಿಸಿ, ಪರಿಹಾರ ಸೂಚಿಸಲು ಸೂಕ್ತ ಸಮಿತಿಯೊಂದನ್ನು ನೇಮಿಸಬೇಕು’ ಎಂದು ಬರಗೂರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ಉಂಟಾಗಿರುವುದರಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 36 ತಿಂಗಳಿಂದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿಲ್ಲ ಎಂಬ ಮಾಹಿತಿ ಇದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೂ ಕೆಲವು ತಿಂಗಳಿಂದ ವೇತನ ನೀಡಿಲ್ಲ ಎಂಬ ಮಾಹಿತಿ ಲಭಿಸಿದೆ. ಕನ್ನಡದ ಮೂಲಕ ಸ್ಥಳೀಯ ಹಾಗೂ ಜಾಗತಿಕ ಜ್ಞಾನವನ್ನು ನೀಡುವ ಮಹತ್ತರವಾದ ಉದ್ದೇಶದಿಂದ ಆರಂಭವಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಇಂತಹ ಆರ್ಥಿಕ ದುಃಸ್ಥಿತಿ ಬರಬಾರದು ಎಂದು ಹೇಳಿದ್ದಾರೆ.

ADVERTISEMENT

ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸಮಸ್ಯೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವ ಅನುದಾನವನ್ನುತಕ್ಷಣವೇ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಬೇಕು. ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ಕನ್ನಡ ಪರ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ ಮತ್ತು ಪ್ರಶ್ನಾರ್ಹವಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.