ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಾದರಿ: ಬರಗೂರು ರಾಮಚಂದ್ರಪ್ಪ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 15:41 IST
Last Updated 30 ಜುಲೈ 2025, 15:41 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ಬೆಂಗಳೂರು: ಕೇಂದ್ರೀಯ ಶಾಲಾ ಪರೀಕ್ಷೆಗಳ ಮಾದರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಶಾಲಾ ಶಿಕ್ಷಣ ಇಲಾಖೆ ನಿರ್ಧಾರಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. 

ಆಂತರಿಕ ಮೌಲ್ಯಮಾಪನದ ಅಂಕಗಳೂ ಸೇರಿ ಪ್ರತಿ ವಿಷಯದಲ್ಲಿ 33 ಅಂಕ ಗಳಿಸಿದರೆ ತೇರ್ಗಡೆ ಮಾಡುವ ಕ್ರಮ ಶಿಕ್ಷಣದ ಗುಣಮಟ್ಟಕ್ಕೆ ಮಾರಕವಾಗುತ್ತದೆ. ಆಂತರಿಕ ಮೌಲ್ಯಮಾಪನದಲ್ಲಿ ವಿದ್ಯಾರ್ಥಿಗೆ ಒಂದು ವಿಷಯದಲ್ಲಿ 20ಕ್ಕೆ 20 ಅಂಕ ನೀಡಿದರೆ ಆ ವಿದ್ಯಾರ್ಥಿ ಮುಖ್ಯ ಪರೀಕ್ಷೆಯಲ್ಲಿ ಕೇವಲ 13 ಅಂಕ ಪಡೆದರೂ ಸಾಕು. ಇದು ಅವೈಜ್ಞಾನಿಕ ಕ್ರಮ ಎಂದು ದೂರಿದ್ದಾರೆ. 

ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ತಿರಸ್ಕರಿಸಿ, ರಾಜ್ಯ ಶಿಕ್ಷಣ ನೀತಿಗೆ (ಎಸ್‌ಇಪಿ) ಆಯೋಗವನ್ನು ರಚಿಸಲಾಗಿದೆ. ಈಗ ಕೇಂದ್ರೀಯ ಶಾಲಾ ಪರೀಕ್ಷಾ ಮಾದರಿ ಅನುಸರಿಸುವುದು ಒಂದು ತಾತ್ವಿಕ ವಿಪರ್ಯಾಸ. ಎನ್‌ಸಿಇಆರ್‌ಟಿ ಮಾದರಿಯಲ್ಲೇ ಪಠ್ಯಪುಸ್ತಕಗಳು ಇರಬೇಕು ಎನ್ನುವುದೂ ಸಾಕಾರಗೊಳ್ಳುವುದಾದರೆ ಎನ್‌ಇಪಿ ತಿರಸ್ಕರಿಸುವ ಅಗತ್ಯವೇ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಠ್ಯಾಧಾರಿತ ಮೌಲ್ಯಮಾಪನ ಎಂಬ ಹೊಸ ಪ್ರಯೋಗವನ್ನು ಈಚೆಗೆ ಅನುಷ್ಠಾನಗೊಳಿಸುತ್ತಿದ್ದು, ಶಿಕ್ಷಕರು ವರ್ಷವಿಡೀ ಕಿರುಪರೀಕ್ಷೆಗಳನ್ನು ನಡೆಸುವ ಪ್ರಾಯೋಗಿಕವಲ್ಲದ ಪದ್ಧತಿಯಿಂದಾಗಿ ವಿದ್ಯಾರ್ಥಿಗಳು 25ಕ್ಕೂ ಹೆಚ್ಚು ಕಿರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪ್ರಯೋಗಗಳಿಂದ ಶಿಕ್ಷಣದ ಗುಣಮಟ್ಟಕ್ಕಿಂತ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಒತ್ತಡ ಹೆಚ್ಚಾಗುತ್ತದೆ ಎಂದಿದ್ದಾರೆ. 

ವೈಜ್ಞಾನಿಕವಾದ ಪ್ರಯೋಗಗಳಿಗೆ ಮುಂದಾಗುವ ಬದಲು, ಕೂಡಲೇ ರಾಜ್ಯ ಶಿಕ್ಷಣ ನೀತಿಯ ವರದಿ ಪಡೆದು ಚರ್ಚೆ–ಚಿಂತನೆ ನಡೆಸಬೇಕು. ನಿರ್ದಿಷ್ಟ ನಿರ್ಧಾರಕ್ಕೆ ಬರುವವರೆಗೆ ಹೊಸ ಪ್ರಯೋಗಗಳಿಗೆ ಮುಂದಾಗಬಾರದು ಎಂದು ಸಲಹೆ ನೀಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.