ADVERTISEMENT

ಕ್ಷೌರಿಕರು ಅಮಂಗಲರಲ್ಲ: ಶೃಂಗೇರಿ ವಿಧುಶೇಖರ ಭಾರತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:15 IST
Last Updated 23 ಅಕ್ಟೋಬರ್ 2024, 15:15 IST
ವಿಧುರಶೇಖರ ಭಾರತಿ ಸ್ವಾಮೀಜಿ
ವಿಧುರಶೇಖರ ಭಾರತಿ ಸ್ವಾಮೀಜಿ   

ಬೆಂಗಳೂರು: ‘ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜದವರು ಅಮಂಗಲ. ಅವರನ್ನು ನೋಡುವುದು ದುರದೃಷ್ಟ ಎಂಬ ಮಾತುಗಳು ಅನುಚಿತವಾದುದು’ ಎಂದು ಶೃಂಗೇರಿ ಪೀಠಾಧೀಶ ವಿಧುರಶೇಖರ ಭಾರತಿ ಸ್ವಾಮೀಜಿ ಹೇಳಿದರು.

ಬುಧವಾರ ಹಮ್ಮಿಕೊಂಡಿದ್ದ ‘ಚಾತುರ್ಮಾಸದಲ್ಲಿ ಒಂದು ದಿನ ಸವಿತಾ ಸಮಾಜಕ್ಕೆ ಆಶೀರ್ವಚನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸನಾತನ ಧರ್ಮದಲ್ಲಿ ಮನುಷ್ಯ ಹೇಗಿರಬೇಕು ಎಂಬ ಬಗ್ಗೆ ಸ್ಪಷ್ಟವಾದ ನಿಯಮವಿದೆ. ಮನುಷ್ಯ ಎಲ್ಲರನ್ನೂ ಗೌರವದಿಂದ ಕಾಣಬೇಕು. ಯಾವುದೇ ಸಮಾಜದ ಮೇಲಿರುವ ಕೇವಲ ದೃಷ್ಟಿ ಹೋಗಿ ಗೌರವದ ದೃಷ್ಟಿ ಹರಿಯಬೇಕು. ಎಲ್ಲ ಸಮಾಜಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಆಶಿಸಿದರು.

ADVERTISEMENT

‘ಕ್ಷೌರಿಕ ವೃತ್ತಿ ಮಾಡುವ ಮೂಲಕ ಸವಿತಾ ಸಮುದಾಯದವರು ನಮ್ಮೆಲ್ಲರನ್ನೂ ಸುಂದರರನ್ನಾಗಿ ಮಾಡುತ್ತಿದ್ದಾರೆ. ಅದೇ ರೀತಿ ವಾದ್ಯ ಸೇವೆ ದೇವರ ಸೇವೆಯಾಗಿದ್ದು, ಮಂಗಲವಾದ್ಯ ವಿಶೇಷ ವೃತ್ತಿಯಾಗಬೇಕು. ಮಂಗಲವಾದ್ಯ ನುಡಿಸುವ ಸಮುದಾಯವನ್ನ ಕಂಡರೆ ಎಲ್ಲವೂ ಮಂಗಲವಾಗುತ್ತದೆ. ಈ ವೃತ್ತಿಗೆ ಶಾಶ್ವತವಾದ ನೆಲೆ, ಬೆಲೆ ಗೌರವ ಸಿಗುವಂತಾಗಬೇಕು. ಈ ಎರಡೂ ವೃತ್ತಿಗಳಲ್ಲಿರುವ ಸವಿತಾ ಸಮಾಜ ಎಲ್ಲ ವಲಯಗಳಲ್ಲಿ ಮುಂಚೂಣಿಗೆ ಬರಬೇಕು’ ಎಂದು ಹೇಳಿದರು.

ಕ್ಷೌರಿಕ ವೃತ್ತಿ ಮಾಡುವವರ ಬಗ್ಗೆ ವಾಹಿನಿಗಳಲ್ಲಿ ಅವಹೇಳನ ರೀತಿಯಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನೈಜ ಅಧ್ಯಯನ ಮಾಡಿದವರು ಎಂದೂ ಈ ರೀತಿ ಮಾತನಾಡಲು ಸಾಧ್ಯವಿಲ್ಲ ಎಂದರು.

ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಪೀಠದ ಮಠಾಧೀಶರಾದ ಶಂಕರಭಾರತಿ ಸ್ವಾಮೀಜಿ, ಸವಿತಾ ಸಮಾಜ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್. ನರೇಶ್‌ ಕುಮಾರ್‌, ಮುಖಂಡರಾದ ಕಿರಣ್‌ ಸಂಪತ್‌ಕುಮಾರ್‌, ಎಸಿಪಿ ನಾರಾಯಣಸ್ವಾಮಿ, ವಕೀಲರಾದ ನರಸಿಂಹರಾಜು, ಇನ್‌ಸ್ಪೆಕ್ಟರ್‌ ವಿಶ್ವನಾಥ್‌, ಉಪ ತಹಶೀಲ್ದಾರ್‌ ನಂದೀಶ್‌, ಕನ್ನಡ ಪರ ಹೋರಾಟಗಾರ ಸಾಮ್ರಾಟ್‌ ಮಂಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.