ADVERTISEMENT

ದಾವೆ ವರ್ಗ: ಯತ್ನಾಳ್ ಕೋರಿಕೆ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 22:14 IST
Last Updated 27 ಮಾರ್ಚ್ 2024, 22:14 IST
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್   

ಬೆಂಗಳೂರು: ‘ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನ ವಿರುದ್ಧ ಕನಕಪುರ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾಯಿಸಬೇಕು’ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಈ ಸಂಬಂಧ ಯತ್ನಾಳ್‌ ಸಲ್ಲಿಸಿದ್ದ ಸಿವಿಲ್‌ ದಾವೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಯತ್ನಾಳ್‌ ಅವರು ಕನಕಪುರದ ನ್ಯಾಯಾಲಯಕ್ಕೆ ಹೋದಾಗ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಪೊಲೀಸ್ ಇಲಾಖೆಗೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿದೆ.

ಪ್ರಕರಣವೇನು?: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿನ 2019ರ ಜೂನ್ 23ರಂದು ಯತ್ನಾಳ್ ಅವರು ವಿಜಯಪುರದಲ್ಲಿ, ‘ಡಿ.ಕೆ.ಶಿವಕುಮಾರ್ ನಮ್ಮ (ಬಿಜೆಪಿ) ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ ಪ್ರಕರಣಗಳಿಂದ ರಕ್ಷಣೆ ಕೋರಿದ್ದಾರೆ. ಈ ಸಂಬಂಧ ನಮ್ಮ ಕೇಂದ್ರ ಸಚಿವರ ಮೂಲಕ ಲಾಬಿ ಮಾಡಿದ್ದಾರೆ. ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ತಮ್ಮ ವಿರೋಧ ಇಲ್ಲ ಎಂದು ಶಿವಕುಮಾರ್ ಹೇಳಿದ್ದಾರೆಂಬುದು ನನಗೆ ಗೊತ್ತಿದೆ‘ ಎಂದು ಹೇಳಿದ್ದರು. ಇದನ್ನು ಮಾಧ್ಯಮಗಳು ಪ್ರಸಾರ ಮಾಡಿದ್ದವು.

ADVERTISEMENT

‘ಈ ಹೇಳಿಕೆಯಿಂದ ನನ್ನ ಘನತೆ ಮತ್ತು ವರ್ಚಸ್ಸಿಗೆ ಹಾನಿಯಾಗಿದ್ದು ₹204 ಕೋಟಿ ಪರಿಹಾರ ತುಂಬಿಕೊಡಲು ಪ್ರತಿವಾದಿ ಯತ್ನಾಳ್‌ ಅವರಿಗೆ ಆದೇಶಿಸಬೇಕು’ ಎಂದು ಕೋರಿ ಶಿವಕುಮಾರ್, ಕನಕಪುರ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.