
ಬೆಳಗಾವಿ (ಸುವರ್ಣ ವಿಧಾನಸೌಧ): ‘ನಾನು ಅಡ್ಜಸ್ಟ್‌ಮೆಂಟ್ ಗಿರಾಕಿ ಅಲ್ಲ. ವಿರೋಧ ಪಕ್ಷದ ನಿಜವಾದ ನಾಯಕ ನಾನೇ’ ಎಂದು ಬಿಜೆಪಿಯಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಧಾನಸಭೆಯಲ್ಲಿ ಹಿರಿಯ ಶಾಸಕರಾದ ತಮಗೆ ಮುಂದಿನ ಸಾಲಿನಲ್ಲಿ ಆಸನ ನೀಡಬೇಕೆಂದು ಸಭಾಧ್ಯಕ್ಷರಿಗೆ ಯತ್ನಾಳ ಮನವಿ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷ ಯು.ಟಿ. ಖಾದರ್, ‘ರಾಜಕೀಯದಲ್ಲಿ ಹಿರಿಯರು, ಕಿರಿಯರು ಎಂದು ಇಲ್ಲ. ಹಿರಿತನ ನೋಡಿ ಆಸನ ನೀಡುವುದಿಲ್ಲ. ಬೇಕಾದಾಗ ಬರುವುದು, ಬಿಡುವುದು ಅಲ್ಲ’ ಎಂದರು.
ಅದಕ್ಕೆ ಯತ್ನಾಳ, ‘ನಾವು ಬೇಕಾದಾಗ ಬರುವುದು ಬಿಡುವುದು ಅಲ್ಲ. ನಾವೇ ನಿಜವಾದ ನಿಷ್ಠಾವಂತ ಕಾರ್ಯಕರ್ತರು. ಈ ಸದನದಲ್ಲಿ ವಿರೋಧ ಪಕ್ಷದ ನಿಜವಾದ ನಾಯಕ ಅಂದರೆ ನಾನೇ’ ಎಂದರು.
‘ನಾನು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನಾನು ಮುಖ್ಯಮಂತ್ರಿ ಕಚೇರಿಗೆ ಹೋಗಿಲ್ಲ. ಯಾವ ಮಂತ್ರಿಗಳಿಗೂ ದಯಾಪರನಾಗಿ ಕೇಳಿಕೊಂಡಿಲ್ಲ. ಅದಕ್ಕಾಗಿ ನಾನೇ ವಿರೋಧ ಪಕ್ಷದ ನಾಯಕ. ಬೇಕಿದ್ದರೆ ಉಪ ಸಭಾಧ್ಯಕ್ಷರ ಪಕ್ಕದಲ್ಲಿ ಒಂದು ಕುರ್ಚಿ ನನಗೆ ವ್ಯವಸ್ಥೆ ಮಾಡಿ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ವಿಧಾನಸಭೆಯಲ್ಲಿ ಆನ್‌ಲೈನ್ ಬೆಟ್ಟಿಂಗ್ ಬಗ್ಗೆ ಚರ್ಚೆ ಜೋರಾಗಿತ್ತು. ಬಿಜೆಪಿಯ ಸಿಮೆಂಟ್ ಮಂಜು ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಜಿ. ಪರಮೇಶ್ವರ, ‘ಎಲ್ಲ ಕಡೆ ಬೆಟ್ಟಿಂಗ್ ಜೋರಾಗಿದೆ’ ಎಂದರು.
ಮಧ್ಯಪ್ರವೇಶಿಸಿದ ಬಿಜೆಪಿಯ ವಿ. ಸುನಿಲ್ ಕುಮಾರ್, ‘ಮುಂದಿನ ತಿಂಗಳು ಮುಖ್ಯಮಂತ್ರಿ ಯಾರು ಎಂಬ ಬಗ್ಗೆಯೂ ಶಾಸಕರು, ಜನರ ನಡುವೆ ಬೆಟ್ಟಿಂಗ್ ಜೋರಾಗಿ ನಡೆದಿದ್ದು, ಇದರ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬೇಕಲ್ಲವೇ’ ಎಂದು ನಗುತ್ತಾ ಹೇಳಿದರು.
ಈ ವೇಳೆ ಸದನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿದಂತೆ ಕಾಣಲಿಲ್ಲ. ಆದರೆ, ನಸುನಕ್ಕ ಡಿ.ಕೆ. ಶಿವಕುಮಾರ್ ಅವರು ಸುನಿಲ್ ಕುಮಾರ್ ಕಡೆ ನೋಡುತ್ತಾ ಕಾಲೆಳೆಯುವ ಪ್ರಯತ್ನ ಮಾಡಿದರು.
ರೈತರ ಸಮಸ್ಯೆಗಳ ಬಗ್ಗೆ ಸಿ.ಟಿ. ರವಿ ಅವರು ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸುವ ವೇಳೆ, ‘ಕೇಂದ್ರ ಸರ್ಕಾರವು ಅನುದಾನ ನೀಡುತ್ತಿಲ್ಲ’ ಎಂದು ಕಾಂಗ್ರೆಸ್‌ನ ಸದಸ್ಯರು ದೂರಿದರು.
ಇದರಿಂದ ಸಿಡಿಮಿಡಿಗೊಂಡ ರವಿ ಅವರು, ‘ಕುಣಿಯಲಾರದವರು, ನೆಲ ಡೊಂಕು ಎಂದರಂತೆ’ ಎಂದು ಹಂಗಿಸಿದರು. ಕಾಂಗ್ರೆಸ್‌ನ ರಮೇಶ್ ಬಾಬು, ‘ಒಂದು ಪಕ್ಷದ ವಿಚಾರದಲ್ಲಿ ಈ ರೀತಿಯ ಪದ ಬಳಕೆ ಮಾಡಬಾರದು. ಅವರು ಅಂತಹ ಮಾತುಗಳನ್ನು ಆಡುವುದೇ ಆದರೆ, ‘ಸಚ್ಚಾರಿತ್ರ್ಯ ಇಲ್ಲದವರು ತುಳಸಿ ಕಟ್ಟೆ ಸುತ್ತಿದರೆ...’ ಎಂದು ನಾನೂ ಹೇಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ರವಿ ಅವರು ತಕ್ಷಣವೇ, ‘ಸಚ್ಚಾರಿತ್ರ್ಯ ಇಲ್ಲದವರು ಪದೇ-ಪದೇ ಪಕ್ಷ ಬದಲಿಸುತ್ತಾರೆ. ಸಚ್ಚಾರಿತ್ರ್ಯರು ಒಂದೇ ಪಕ್ಷದಲ್ಲಿ ಇರುತ್ತಾರೆ’ ಎಂದು ರಮೇಶ್ ಬಾಬು ಅವರ ಕಾಲೆಳೆದರು.
ಸಚಿವ ಸಂತೋಷ್ ಲಾಡ್, ‘ಹಾಗಿದ್ದಲ್ಲಿ ನಿಮ್ಮ ಪಕ್ಷದತ್ತ ಬಂದ 16 ಶಾಸಕರನ್ನು ಏಕೆ ಸೇರಿಸಿಕೊಂಡಿರಿ? ಮಹಾರಾಷ್ಟ್ರದಲ್ಲಿ 70,000 ಕೋಟಿ ಅಕ್ರಮ ನಡೆಸಿದ್ದಾರೆ ಎಂದು ನಿಮ್ಮ ಪಕ್ಷದವರೇ ಆರೋಪಿಸಿದ್ದ ನಾಯಕರೊಬ್ಬರ ಮನೆಗೆ, ನಿಮ್ಮವರೇ ಹೋಗಿ ಸರ್ಕಾರ ರಚಿಸಿದ್ದು ಏಕೆ? ಸಚ್ಚಾರಿತ್ರ್ಯ ಇಲ್ಲದವರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದನ್ನು ಹೇಳಿ’ ಎಂದು ಛೇಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.