ಬೆಂಗಳೂರು: ‘ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡದಿದ್ದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಅವರು ಬ್ಲ್ಯಾಕ್ ಮೇಲ್ ಮಾಡಿದ್ದರು. ಆದ್ದರಿಂದಲೇ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ’ ಎಂದು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ತಮ್ಮ ಮಗನ ರಕ್ಷಣೆಗಾಗಿ ಯಡಿಯೂರಪ್ಪ ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಿದ್ದಾರೆ. ತಾವು ಸಾಯುವ ಮುನ್ನ ವಿಜಯೇಂದ್ರ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದು ಅವರ ಆಸೆ. ರೈತರು ಮತ್ತು ಬಡವರ ಕುರಿತು ಕಾಳಜಿ ಅವರಿಗಿಲ್ಲ’ ಎಂದು ದೂರಿದರು.
‘ಕರ್ನಾಟಕವನ್ನು ಇನ್ನಷ್ಟು ಲೂಟಿ ಮಾಡಬೇಕು. ಈಗ ಕೇವಲ ಮಾರಿಷಿಯಸ್, ದುಬೈನಲ್ಲಿ ಮಾತ್ರ ಆಸ್ತಿ ಇದೆ. ಇಡಿ ಜಗತ್ತಿನಲ್ಲಿ ಆಸ್ತಿ ಮಾಡಬೇಕು ಅಂತ ಹೊರಟಿದ್ದಾರೆ. ಚೇಲಾಗಳ ಕೈಯಲ್ಲಿ ಮಾತನಾಡಿಸುವ ಬದಲು ವಿಜಯೇಂದ್ರ ನೇರವಾಗಿ ನನ್ನ ಬಗ್ಗೆ ಮಾತನಾಡಲಿ’ ಎಂದು ಸವಾಲು ಹಾಕಿದರು.
‘ಬಿ.ವೈ.ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯದ ಹೊರತು ನಾನು ಪುನಃ ಬಿಜೆಪಿಗೆ ಹೋಗುವುದಿಲ್ಲ. ಅವರ ಕುಟುಂಬದ ಸದಸ್ಯರು ಬಿಜೆಪಿಯಿಂದ ಹೊರ ಹೋಗಬೇಕು’ ಎಂದರು.
‘ನಿಮ್ಮನ್ನು ಮತ್ತೆ ಬಿಜೆಪಿಗೆ ಕರೆತರಲು ರಮೇಶ ಜಾರಕಿಹೊಳಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಭೇಟಿ ಮಾಡಿದರೆ’ ಎಂಬ ಪ್ರಶ್ನೆಗೆ, ‘ಕೃಷ್ಣಾ ಮತ್ತು ಭೀಮಾ ನದಿಗೆ ನೀರು ಬಿಡುವಂತೆ ಮನವಿ ಮಾಡಲು ಫಡಣವೀಸ್ ಅವರನ್ನು ಭೇಟಿ ಮಾಡಿದ್ದಾರೆ. ನನ್ನ ಸಲುವಾಗಿ ಚರ್ಚೆ ಮಾಡುವ ಅವಶ್ಯವಿಲ್ಲ. ಈಗಾಗಲೇ ಪಕ್ಷದಿಂದ 6 ವರ್ಷ ಹೊರಗೆ ಹಾಕಿದ್ದಾರೆ’ ಎಂದರು.
‘ವಕ್ಫ್ ಮಸೂದೆ ಅಂಗೀಕಾರವಾಗಿದೆ. ಕರ್ನಾಟಕದಿಂದ ನಾವೂ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ಜಂಟಿ ಸದನ ಸಮಿತಿಗೆ ಕೊಟ್ಟಿದ್ದೆವು. ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರು ಇಡೀ ರಾಜ್ಯ ಸುತ್ತಿ ದಾಖಲೆಗಳನ್ನು ಸಂಗ್ರಹ ಮಾಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.