ಬೆಂಗಳೂರು: 'ಕೂಡಲ ಸಂಗಮಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠದಿಂದ ಉಚ್ಚಾಟಿಸಿರುವುದು ಸರಿಯಲ್ಲ. ಸ್ವಾಮೀಜಿಯವರನ್ನು ಸದ್ಯವೇ ಭೇಟಿ ಮಾಡಿ ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು' ಎಂದು ಬಿಜೆಪಿ ಶಾಸಕ ಸಿ.ಸಿ.ಪಾಟೀಲ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಮಾಜ ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ, ಶಿವಶಂಕರ್, ಅರವಿಂದ ಬೆಲ್ಲದ, ಸಿದ್ದು ಸವದಿ ಮತ್ತು ಎಂ.ಬಿ.ಪಾಟೀಲ ಜತೆ ಸೇರಿ ಸ್ವಾಮೀಜಿಯವರನ್ನು ಭೇಟಿ ಮಾಡುತ್ತೇನೆ.ಈ ವಿಷಯವನ್ನು ಸ್ವಾಮೀಜಿಯವರ ಗಮನಕ್ಕೆ ತಂದಿದ್ದೇನೆ’ ಎಂದರು.
‘ಬಸವ ಜಯಮೃತ್ಯುಂಜಯ ಸ್ವಾಮೀಜಿ ನಮ್ಮ ಸಮಾಜದ ಏಳಿಗೆಗಾಗಿ 750 ಕಿ.ಮೀ. ಪಾದಯಾತ್ರೆ ಮಾಡಿದ್ದರು. ಪೀಠಕ್ಕೆ ಏರಿದಾಗಿನಿಂದಲೂ ಸಮಾಜವನ್ನು ಸಂಘಟಿಸಲು ಹಗಲಿರುಳು ದುಡಿದಿದ್ದಾರೆ. ಹಣದ ಆಸೆಗೆ ಎಂದೂ ಬಲಿಯಾದವರಲ್ಲ. ಎಂಟು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಸ್ವಾಮೀಜಿ ಉಚ್ಚಾಟನೆ ಅನಿರೀಕ್ಷಿತ ಅಲ್ಲ. ಟ್ರಸ್ಟ್ ಮತ್ತು ವಿಜಯಾನಂದ ಕಾಶಪ್ಪ ಅವರ ಹಲವು ತಿಂಗಳ ನಡವಳಿಕೆಯಿಂದ ಇದು ಗೊತ್ತಾಗುತ್ತಿತ್ತು’ ಎಂದರು.
‘ನಾನಾಗಲಿ, ನೀವಾಗಲಿ (ಕಾಶಪ್ಪ) ವೈರಿಗಳಲ್ಲ. ಸಮಾಜದ ಸಂಘಟನೆಗೆ ಹೋರಾಟ ಮಾಡಿದವರು. ನಿಮ್ಮ ಮತ್ತು ಸ್ವಾಮೀಜಿ ಮಧ್ಯೆ ಭಿನ್ನಾಭಿಪ್ರಾಯ ಇದ್ದರೆ, ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದ್ದೆ’ ಎಂದು ಪಾಟೀಲ ಹೇಳಿದರು.
‘ಶ್ರೀಗಳ ಉಚ್ಛಾಟನೆ; ಚರ್ಚಿಸಿ ನಿರ್ಣಯ’
ಮೈಸೂರು: ‘ಬಸವ ಜಯಮೃತ್ಯುಂಜಯ ಸ್ವಾಮಿಗಳು ಸಾಕಷ್ಟು ತ್ಯಾಗ ಮಾಡಿದ್ದಾರೆ. ಸದ್ಯದ ವಿವಾದದ ಕುರಿತು ಸಮುದಾಯದ ಮುಖಂಡರು ಒಟ್ಟಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ನಿರ್ಣಯ ಬಗ್ಗೆ ಮಂಗಳವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ಇಂತಹದ್ದೊಂದು ನಿರ್ಣಯ ಆಗಬಾರದಿತ್ತು. ಈ ಕುರಿತು ಮಾತುಕತೆ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.