
ಬೆಂಗಳೂರು: ‘ರಾಜ್ಯಪಾಲರ ವಿರುದ್ಧ ರಾಜ್ಯ ಸರ್ಕಾರವು ಕಾನೂನು ಕ್ರಮಕ್ಕೆ ಮುಂದಾಗಿರುವುದು ಖಂಡನೀಯ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ರಾಜ್ಯ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೆ ಮತ್ತು ರಾಜಕೀಯದ ಕಾರಣಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ. ಈ ವಿಚಾರದಲ್ಲಿ ರಾಜ್ಯಪಾಲರನ್ನು ಸಿಲುಕಿಸಿರುವುದು ಅವರಿಗೆ ಮಾಡುತ್ತಿರುವ ಅವಮಾನವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣದ ಮೊದಲ ಮತ್ತು ಕೊನೆಯ ಪುಟಗಳನ್ನು ರಾಜ್ಯಪಾಲರು ಓದದೇ ಇರುವ ಹಲವು ನಿದರ್ಶನಗಳು ನಮ್ಮೆದುರು ಇವೆ. ಆದರೆ, ಆ ಕಾರಣಕ್ಕೆ ಅವರನ್ನು ಗೂಂಡಾಗಿರಿಗೆ ಗುರಿ ಮಾಡುವುದು ಸರಿಯಲ್ಲ. ಈ ಹಿಂದೆ ರಾಜ್ಯಪಾಲರಾಗಿದ್ದ ಎಚ್.ಆರ್.ಭಾರಧ್ವಾಜ್ ಅವರು ಹಲವು ಬಾರಿ ಮಿತಿಮೀರಿ ವರ್ತಿಸಿದ್ದಾರೆ. ಆಗ ರಾಜಭವನವು, ಕಾಂಗ್ರೆಸ್ ಭವನ ಆಗಿತ್ತು ಎಂಬುದನ್ನು ಸಿದ್ದರಾಮಯ್ಯ ಅವರು ಮರೆಯುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದ್ದಾರೆ.
‘ಸರ್ಕಾರವು ಕ್ರಮ ತೆಗೆದುಕೊಳ್ಳಲೇಬೇಕು ಎಂದಿದ್ದರೆ, ವಿಧಾನ ಪರಿಷತ್ ಸದಸ್ ಬಿ.ಕೆ.ಹರಿಪ್ರಸಾದ್ ವಿರುದ್ಧ ತೆಗೆದುಕೊಳ್ಳಬೇಕು. ಅವರನ್ನು ತಕ್ಷಣವೇ ವಜಾ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.