ADVERTISEMENT

Karnataka Budget | ಹಿಂದುತ್ವಕ್ಕೆ ಒತ್ತು, ಅಂಬೇಡ್ಕರ್ ಪ್ರಜ್ಞೆಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 19:48 IST
Last Updated 4 ಮಾರ್ಚ್ 2022, 19:48 IST
   

ದೂರದ ಬೆಟ್ಟ ನುಣ್ಣಗೆ ಹೇಗೋ ಸರ್ಕಾರ ಮಂಡಿಸುವ ಬಜೆಟ್ಟುಗಳೂ ಹಾಗೆಯೇ ಇರುತ್ತವೆ. ಪರಿಶಿಷ್ಟರ ಉಪಯೋಜನೆ ಮೀಸಲು ಹಣದ ವಿಚಾರಕ್ಕೆ ಬಂದಾಗ ಈ ಮಾತು ಸದಾ ಸತ್ಯವಾಗಿರುತ್ತದೆ. ದಲಿತರ ಮೀಸಲು ಹಣ ಎದುರಿಸುವ ನಾಲ್ಕು ಮುಖ್ಯ ಸಮಸ್ಯೆಗಳಿವು: 1. ಬಜೆಟ್ಟಿನ ಯೋಜನಾ ಗಾತ್ರದ ಶೇ 24.01 ರಷ್ಟು ಅನುದಾನ ಮೀಸಲಿಡುವುದಿಲ್ಲ. 2.ಮೀಸಲಿಟ್ಟ ಕಡಿಮೆ ಅನುದಾನದಲ್ಲಿ ಸಂಪೂರ್ಣ ಹಣ ಬಿಡುಗಡೆಗೊಳಿಸುವುದಿಲ್ಲ. 3. ಬಿಡುಗಡೆಗೊಳಿಸಿದ ಅನುದಾನದಲ್ಲಿ ಅರ್ಧದಷ್ಟನ್ನೂ ಖರ್ಚು ಮಾಡುವುದಿಲ್ಲ. 4. ಖರ್ಚು ಮಾಡಿದ ಬಿಡಿಗಾಸಿನಲ್ಲೂ ಸಹ ದಲಿತರಿಗೆ ನೇರವಾಗಿ ಉಪಯೋಗವಾಗುವ ಯೋಜನೆಗಳಿಗೆ ಬಳಸುವುದಿಲ್ಲ.

ವರ್ಷದಿಂದ ವರ್ಷಕ್ಕೆ ಬಜೆಟ್ ಗಾತ್ರ ಹೆಚ್ಚಾಗುತ್ತಲೇ ಬಂದಿದೆ. ಆದರೆ 2018-19ನೇ ಸಾಲಿನಿಂದ ಪರಿಶಿಷ್ಟರಿಗೆ ಮೀಸಲಿಡುವ ಹಣ ಕಡಿಮೆಯಾಗುತ್ತ ಬಂದಿದೆ. ಕಳೆದ ವರ್ಷ ಪರಿಶಿಷ್ಟರ ಉಪಯೋಜನೆಗೆ ಮೀಸಲಿರಿಸಿದ್ದ ಅನುದಾನ ₹26,005ಕೋಟಿ. ಅದರಲ್ಲಿ ಬಿಡುಗಡೆಗೊಳಿಸಿದ ಹಣ ಕೇವಲ 16,450 ಕೋಟಿ. ಅಂದರೆ ₹9,555 ಕೋಟಿಯಷ್ಟು ಹಣವನ್ನು ಬಿಡುಗಡೆಗೊಳಿಸಿಲ್ಲ. ಖರ್ಚು ಮಾಡಿದ ಹಣದಲ್ಲಿ ನೇರವಾಗಿ ದಲಿತರಿಗೆ ತಲುಪುವ ಮಾನವ ಅಭಿವೃದ್ಧಿಗೆ ಬಳಸಿರುವುದು ₹4,128 ಕೋಟಿಯಾದರೆ ಮೂಲಸೌಕರ್ಯಗಳ ಹೆಸರಲ್ಲಿ ದಲಿತರಿಗೆ ನೇರವಾಗಿ ಉಪಯೋಗವಲ್ಲದ ಕಾರ್ಯಗಳಿಗೆ ಬಳಸಿರುವ ಹಣ ₹6,670 ಕೋಟಿ. ಕಳೆದ ಸಾಲಿನಲ್ಲಿ ಕಾಯ್ದೆಯ ‘7ಡಿ’ ಸೆಕ್ಷನ್ ಬಳಸಿಕೊಂಡು ದಲಿತರ ಹಣವನ್ನು ಇತರೆ ಕಾರ್ಯಗಳಿಗೆ ಬಳಸಿದೆ. ಅತ್ಯಂತ ದುಃಖಕರ ಸಂಗತಿಯೆಂದರೆ ಸುಮಾರು 25 ಇಲಾಖೆಗಳ 47 ಯೋಜನೆಗಳಿಗೆ ಮೀಸಲಿರಿಸಿದ್ದ ಹಣದಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡದೇ ₹1,744 ಕೋಟಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿರುವುದು. ಇದು ಕಳೆದ ವರ್ಷದ ದಲಿತರ ಮೀಸಲು ಹಣದ ಹಣೆಬರೆಹ.

ಈ ವರ್ಷದ ಬಜೆಟ್ಟಿನಲ್ಲಿ 2023 ರ ಚುನಾವಣೆಯ ಘಾಟು ಮುಖಕ್ಕೆ ಹೊಡೆಯುತ್ತಿದೆ. ಲಿಂಗಾಯತ ಮಠಗಳನ್ನು ಕೈ ಬಿಟ್ಟು ದಲಿತರ ಮಠಗಳಿಗೆ ವಿಶೇಷ ಸೌಲಭ್ಯ ನೀಡುವುದಾಗಿ ಹೇಳಲಾಗಿದೆ. ಆದರೆ ನಿರ್ದಿಷ್ಟವಾಗಿ ಹಣ ಹಂಚಿಕೆಯಾಗಿಲ್ಲ. ದುರ್ಬಲ ವರ್ಗದ ಮಕ್ಕಳಿಗಾಗಿ ಚಾತುರ್ವರ್ಣ ಪದ್ಧತಿಯ ಸಮರ್ಥಕರಾದ ದೀನದಯಾಳ್ ಉಪಾಧ್ಯಾಯ ಹೆಸರಿನಲ್ಲಿ ವಸತಿ ಶಾಲೆಯನ್ನು ತೆರೆಯಲು ₹ 250 ಕೋಟಿ ನೀಡಲಾಗಿದೆ. ದಲಿತ ಪ್ರಜ್ಞೆಯ ಬದಲಾಗಿ ಹಿಂದುತ್ವ ಪ್ರಜ್ಞೆಯ ಪರವಾಗಿದ್ದೇವೆ ಎಂದು ಸರ್ಕಾರ ಪರೋಕ್ಷವಾಗಿ ಹೇಳುತ್ತಿದೆ. ದಲಿತರ ಶಿಕ್ಷಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕುದ್ಮುಲ್ ರಂಗರಾವ್, ಗೋಪಾಲಸ್ವಾಮಿ ಅಯ್ಯಂಗಾರ್, ತಲಕಾಡು ರಂಗೇಗೌಡರು ಅಥವಾ ಜಗಜೀವನ್ ರಾಮ್ ಅವರ ಹೆಸರಿಟ್ಟಿದ್ದರೆ ದಲಿತರು ಖುಷಿ ಪಡುತ್ತಿದ್ದರು.

ADVERTISEMENT

ಅಂಬೇಡ್ಕರ್ ಅವರು ಕರ್ನಾಟಕದಲ್ಲಿ ಭೇಟ ನೀಡಿರುವ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಲಾಗಿದೆ. ಆದರೆ ಹಣ ನಿಗದಿ ಮಾಡಿಲ್ಲದಿರುವುದರಿಂದ ಕಾಗದದ ಮೇಲೆಯೇ ಉಳಿಯುವ ಎಲ್ಲಾ ಸಾಧ್ಯತೆಗಳೂ ಇವೆ. ಅಸ್ಪೃಶ್ಯತೆಯ ವಿರುದ್ಧ ಜಾಗೃತಿ ಮೂಡಿಸಲು ‘ವಿನಯ ಸಾಮರಸ್ಯ ಯೋಜನೆ’ ಯನ್ನು ರೂಪಿಸಲಾಗಿದೆ. ನಿಜವೆಂದರೆ ಕಳೆದ ವರ್ಷ ದಲಿತರ ಮೇಲೆ 2327 ದೌರ್ಜನ್ಯಗಳನ್ನು ಎಸಗಲಾಗಿದೆ. 2020ನೇ ವರ್ಷಕ್ಕೆ ಹೋಲಿಸಿಕೊಂಡರೆ ಶೇ 45 ರಷ್ಟು ಹೆಚ್ಚಾಗಿದೆ. ಆದರೆ ಶಿಕ್ಷೆ ನೀಡಿದ ಪ್ರಮಾಣ ಶೇ 5 ಕ್ಕಿಂತಲೂ ಕಡಿಮೆ. ಹಾಗಾಗಿ ಅಸ್ಪೃಶ್ಯತೆ ಪಿಡುಗನ್ನು ಕಡಿಮೆಗೊಳಿಸಲು ಅಟ್ರಾಸಿಟಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಜಾತಿವಿರೋಧಿ ಮನಸ್ಸುಗಳನ್ನು ಜಾಗೃತಗೊಳಿಸಬೇಕಿದೆ.

ಗಂಗಾ ಕಲ್ಯಾಣ ಯೋಜನೆಗೆ ಈ ವರ್ಷ ಕೇವಲ ₹ 500 ಕೋಟಿ ನೀಡಿರುವ ಸರ್ಕಾರ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಉಳಿದಿದ್ದ ₹625 ಕೋಟಿ ಹಣ ಸೇರಿಸಿ ₹ 1,115 ಕೋಟಿ ಎಂದು ಹೇಳುತ್ತಿದೆ.

ಬೃಹತ್ ಸಂಖ್ಯೆಯಲ್ಲಿರುವ ಅತಿ ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಕೇವಲ ₹400 ಕೋಟಿ ನೀಡಿ ಹಿಂದಿನ ವರ್ಷದಂತೆ ಮತ್ತೆ ಅನ್ಯಾಯವೆಸಗಲಾಗಿದೆ. ಒಕ್ಕಲಿಗ, ಲಿಂಗಾಯತ ಹಾಗೂ ಮರಾಠ ಸಮುದಾಯಗಳ ಅನುದಾನಕ್ಕೆ ಹೋಲಿಸಿಕೊಂಡರೆ ಕನಿಷ್ಠ ₹1000 ಕೋಟಿಯನ್ನಾದರೂ ನೀಡಬೇಕಿತ್ತು. ಒಟ್ಟಾರೆ ಇದು ಚುನಾವಣಾ ಪೂರ್ವ ಬಜೆಟ್. ಮುಂದಿನ ವರ್ಷ ಬಜೆಟ್ ಅನುಷ್ಟಾನವನ್ನು ವಿಶ್ಲೇಷಿಸಲು ಕುಳಿತಾಗ ಬರಿ ನಿರಾಶೆಯೇ ಕಾದಿರುತ್ತದೆ.

ದಲಿತ ಸಂಘಟನೆಗಳ ಬಹುಕಾಲದ ಬೇಡಿಕೆಯಾಗಿದ್ದ ಸಾವಿತ್ರಿ ಬಾಯಿ ಫುಲೆ‌ ಅವರ ಹೆಸರಿನಲ್ಲಿ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ನೀಡುವುದಾಗಿ ಘೋಷಿಸಿರುವುದು ಸಮಾಧಾನದ ಸಂಗತಿ.

ಲೇಖಕ: ಸಾಮಾಜಿಕ ವಿಶ್ಲೇಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.