ADVERTISEMENT

ಆಯಕಟ್ಟಿನ ಖಾತೆಗೆ ನೂತನ ಸಚಿವರ ಬೇಡಿಕೆ

ಕಂದಾಯ, ಲೋಕೋಪಯೋಗಿ, ಜಲಸಂಪನ್ಮೂಲ, ಇಂಧನದ ಮೇಲೆ ಕಣ್ಣು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 21:04 IST
Last Updated 5 ಆಗಸ್ಟ್ 2021, 21:04 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರು   

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಕುರಿತುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಂಪುಟದ ಹಿರಿಯ ಸಹೋದ್ಯೋಗಿಗಳ ಜತೆ ಚರ್ಚೆ ಗುರುವಾರ ನಡೆಸಿದ್ದು, ತಮಗೆ ಇಂತಹದ್ದೇ ಆಯಕಟ್ಟಿನ ಖಾತೆ ಬೇಕು ಎಂದು ಕೆಲವು ಸಚಿವರು ಬೇಡಿಕೆ ಮಂಡಿಸಿದ್ದಾರೆ.

ಕಂದಾಯ, ಜಲಸಂಪನ್ಮೂಲ, ಲೋಕೋಪಯೋಗಿ, ಬೃಹತ್ ಕೈಗಾರಿಕೆ, ಇಂಧನದಂತಹ ಪ್ರಮುಖ ಖಾತೆಗಳ ಮೇಲೆ ಹಿರಿಯ ಸಚಿವರು ಕಣ್ಣಿಟ್ಟಿದ್ದಾರೆ. ‘ವಲಸಿಗ’ ಗುಂಪಿನನ ಸಚಿವರು ತಮ್ಮ ಆಸಕ್ತಿ ಖಾತೆಗಳನ್ನೇ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಚಿವ ಸಂಪುಟ ರಚನೆಯ ವೇಳೆ ಪಕ್ಷದ ವರಿಷ್ಠರ ಸೂಚನೆಯಂತೆಯೇ ನಡೆದುಕೊಂಡಿದ್ದ ಬೊಮ್ಮಾಯಿ, ಖಾತೆಹಂಚಿಕೆ ಹೊತ್ತಿನಲ್ಲೂ ವರಿಷ್ಠರ ಒಪ್ಪಿಗೆ ಪಡೆದೇ ಅಂತಿಮ ನಿರ್ಣಯ ಕೈಗೊಳ್ಳುವ ಚಿಂತನೆಯಲ್ಲಿದ್ದಾರೆ.

ಖಾತೆ ಹಂಚಿಕೆ ವಿಚಾರವಾಗಿ ಕುಮಾರಕೃಪಾ ಅತಿಥಿಗೃಹದಲ್ಲಿ ಸಚಿವರ ಜತೆ ಬೊಮ್ಮಾಯಿ ಸಮಾಲೋಚನೆ ನಡೆಸಿದರು. ಯಾವುದೇ ಸಚಿವರೂ ಮುಖ್ಯಮಂತ್ರಿ ಮೇಲೆ ಖಾತೆಗಳಿಗಾಗಿ ಒತ್ತಡ ಹೇರುವ ಕೆಲಸ ಮಾಡಿಲ್ಲ. ಬದಲಿಗೆ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಹೀಗಾಗಿ ಇದು ಕಗ್ಗಂಟಿನ ಸ್ವರೂಪ ಪಡೆದಿಲ್ಲ. ಹಿರಿಯರ ಇಷ್ಟಾನಿಷ್ಟವನ್ನು ಅರಿತು ಖಾತೆ ಹಂಚಿಕೆಯ ಬಗ್ಗೆ ಬೊಮ್ಮಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಬಾಲಚಂದ್ರ ಜಾರಕಿಹೊಳಿ ಅವರು ಜಲಸಂಪನ್ಮೂಲ ಖಾತೆಗಾಗಿ ಪಟ್ಟು ಹಿಡಿದ ಪರಿಣಾಮ ಅವರಿಗೆ ಸಚಿವ ಸ್ಥಾನ ಕೈತಪ್ಪಿತು. ಇದರಿಂದ ಎಚ್ಚೆತ್ತಿರುವ ಉಳಿದ ಸಚಿವರು ಖಾತೆಗಳಿಗಾಗಿ ಒತ್ತಡದ ತಂತ್ರ ಅನುಸರಿಸಲು ಹೋಗಿಲ್ಲ .

ಬೊಮ್ಮಾಯಿ ಅವರು ಹಣಕಾಸು ಮತ್ತು ಜಲಸಂಪನ್ಮೂಲವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಖಾತೆ ಹಂಚಿಕೆಯ ಪಟ್ಟಿ ಶುಕ್ರವಾರ ಬಿಡುಗಡೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.

‘ಆರ್‌.ಅಶೋಕ ಅವರಿಗೆ ಗೃಹ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ವಹಿಸಿಕೊಳ್ಳುವಂತೆ ಮುಖ್ಯಮಂತ್ರಿಯವರು ಸಲಹೆ ನೀಡಿದಾಗ, ಬೇಡವೇ ಬೇಡ ಎಂದು ಅಶೋಕ ಹೇಳಿದರು. ‘ನನ್ನ ಹಿರಿತನಕ್ಕೆ ಬೆಂಗಳೂರು ಅಭಿವೃದ್ಧಿ ಖಾತೆ ಚಿಕ್ಕದು. ಕಂದಾಯವೇ ಇರಲಿ. ಇದರ ಮೂಲಕ ಜನರ ಜತೆ ಸಂಪರ್ಕದಲ್ಲಿ ಇರಲು ಸಾಧ್ಯ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

ಕಂದಾಯದ ಜತೆ ಗೃಹ ಖಾತೆ ನಿರ್ವಹಿಸುವಂತೆ ಆರ್‌ಎಸ್‌ಎಸ್‌ನ ಕೆಲವು ಪ್ರಮುಖರು ಅಶೋಕ ಅವರಿಗೆ ಹೇಳಿದಾಗಲೂ ಒಪ್ಪಲಿಲ್ಲ ಎನ್ನಲಾಗಿದೆ.

ಬೆಂಗಳೂರು ಅಭಿವೃದ್ಧಿ ಖಾತೆಗೆ ವಿ.ಸೋಮಣ್ಣ ಬೇಡಿಕೆ ಸಲ್ಲಿಸಿದ್ದು, ಜಲಸಂಪನ್ಮೂಲ ಅಥವಾ ಇಂಧನ ಖಾತೆಯ ಬಗ್ಗೆ ಕೆ.ಎಸ್‌.ಈಶ್ವರಪ್ಪ ಒಲವು ಹೊಂದಿದ್ದಾರೆ. ‘ಕಳೆದ ಬಾರಿ ಮಹತ್ವವಲ್ಲದ ಖಾತೆಗಳನ್ನು ನೀಡಲಾಗಿತ್ತು. ಈಗ ತಮಗೆ ಉತ್ತಮ ಖಾತೆಗಳನ್ನು ನೀಡಬೇಕು’ ಎಂದು ‘ವಲಸಿಗ’ ಸಚಿವರು ಮುಖ್ಯಮಂತ್ರಿಯವರಲ್ಲಿ ತಮ್ಮ ಅಹವಾಲು
ತೋಡಿಕೊಂಡಿದ್ದಾರೆ.

ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಶಶಿಕಲಾ ಜೊಲ್ಲೆ ಅವರಿಗೆ ಈ ಹಿಂದೆ ಇದ್ದ ಖಾತೆಗಳನ್ನೇ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.