ADVERTISEMENT

ಜಾತಿಗಣತಿ, ಒಳ ಮೀಸಲಾತಿ| ಕಾಂಗ್ರೆಸ್‌ ‘ಡಬಲ್ ಗೇಮ್’: ಬಸವರಾಜ ಬೊಮ್ಮಾಯಿ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಜಾತಿ ಜನಗಣತಿ ಮತ್ತು ಒಳ ಮೀಸಲಾತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಿದೆ. ನಾವು ಎಲ್ಲರಿಗೂ ನ್ಯಾಯ ಕೊಡಿಸುವ ಶಿಫಾರಸು ಮಾಡಿದ್ದೇವೆ. ಆದರೆ, ಕಾಂಗ್ರೆಸ್‌ನವರು ‘ಡಬಲ್‌ ಗೇಮ್‘ ಆಡುತ್ತಿದ್ದಾರೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ದೂರಿದರು.

ಕಾಂಗ್ರೆಸ್‌ ಪಕ್ಷದ ಜಾತಿ ರಾಜಕಾರಣಕ್ಕೆ ಹರಿಯಾಣದ ಜನ ತಕ್ಕ ಪಾಠ ಕಲಿಸಿದ್ದಾರೆ. ಇಡೀ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಅಲ್ಲಿನ ಫಲಿತಾಂಶವೇ ಸಾಕ್ಷಿ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

ರಾಜ್ಯದಲ್ಲಿ ಒಳಮೀಸಲಾತಿ ವಿಚಾರದಲ್ಲಿ ಮೊದಲು ಸಂವಿಧಾನ ತಿದ್ದುಪಡಿ ಆಗಲಿ, ಆ ಬಳಿಕ ಜಾರಿ ಮಾಡುತ್ತೇವೆ ಎಂದು ಕಣ್ಣೊರೆಸುವ ತಂತ್ರ ಮಾಡಿದರು. ಈಗ ಸುಪ್ರೀಂಕೋರ್ಟ್‌ ಆದೇಶ ಬಂದ ಮೇಲೆ ಚರ್ಚೆ ಮಾಡುತ್ತೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ದಲಿತರಾಗಲಿ, ಹಿಂದುಳಿದವರಾಗಲಿ ಅಭಿವೃದ್ಧಿ ಆಗುವುದು ಬೇಕಿಲ್ಲ ಎಂದು ಕುಟುಕಿದರು.

ADVERTISEMENT

‘ಜಾತಿ ಗಣತಿ ವಿಚಾರದಲ್ಲೂ ಅಷ್ಟೇ, ಜಾತಿಗಣತಿ ವರದಿಯನ್ನು ಯಡಿಯೂರಪ್ಪ, ಬೊಮ್ಮಾಯಿ ಸ್ವೀಕಾರ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಕಾಂತರಾಜ ಅವರು ಸಿದ್ದರಾಮಯ್ಯ ಅವಧಿಯಲ್ಲೇ (2017) ವರದಿ ನೀಡಿದ್ದಾರೆ. ಹಿಂದುಳಿದ ವರ್ಗದ ಚಾಂಪಿಯನ್‌ ಎಂದು ಹೇಳಿಕೊಳ್ಳುವವರು ಆಗ ಯಾಕೆ ಒಪ್ಪಿಕೊಳ್ಳಲಿಲ್ಲ’ ಎಂದು ಬೊಮ್ಮಾಯಿ ಪ್ರಶ್ನಿಸಿದರು.

‘ಕಾಂತರಾಜ ಅವರು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದ್ದರು. ಜಯಪ್ರಕಾಶ್ ಹೆಗ್ಡೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ವರದಿ ತಿದ್ದುಪಡಿ ಮಾಡಿದ್ದಾರೆ. ಹಿಂದುಳಿದ ವರ್ಗದವರ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. ಇದು ಗೊಂದಲದ ಗೂಡಾಗಬಾರದು. ಸಮಾಜದಲ್ಲಿ ಗೊಂದಲ ಉಂಟು ಮಾಡಬಾರದು. ಮುಡಾ ಹಗರಣದ ಆರೋಪ ಬಂದ ಕೂಡಲೇ ದಾರಿ ತಪ್ಪಿಸಲು ಜಾತಿ ಗಣತಿ ವರದಿ ಪ್ರಸ್ತಾಪ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ವರದಿ ಅಂಗೀಕರಿಸಿ: ಕನ್ನಡಪರ ಹಿರಿಯ ಹೋರಾಟಗಾರರ ಆಗ್ರಹ

ಬೆಂಗಳೂರು: ಜಾತಿವಾರು ಜನಗಣತಿ ವರದಿಯನ್ನು ಅಂಗೀಕರಿಸಿ, ಮುಂದಿನ ಕ್ರಮ ಜರುಗಿಸಬೇಕು ಎಂದು ಕನ್ನಡಪರ ಹಿರಿಯ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.

‘ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಅವರು ಜಾತಿವಾರು ಜನಗಣತಿ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದಾರೆ. ಸರ್ಕಾರ ಹೋದರೂ ಚಿಂತೆ ಇಲ್ಲ, ಜಾತಿ ಜನಗಣತಿ ವರದಿ ಅಂಗೀಕರಿಸಬೇಕು ಎಂದು ಒತ್ತಾಯಿಸಿರುವುದು ಸರಿಯಾಗಿದೆ. ಅಧಿಕಾರ ರಾಜಕಾರಣಕ್ಕಿಂತ ತತ್ವ, ಸಿದ್ಧಾಂತಕ್ಕೆ ಬದ್ಧತೆಯನ್ನು ಪ್ರತಿಪಾದಿಸಿರುವ ಹರಿಪ್ರಸಾದ್‌ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿ, ಜಾತಿವಾರು ಜನಗಣತಿ ವರದಿಯನ್ನು ಅಂಗೀಕರಿಸಬೇಕು’ ಎಂದು ವೇದಿಕೆ ಅಧ್ಯಕ್ಷ ಜಿ. ಜ್ಞಾನೇಶ್‌ ಒತ್ತಾಯಿಸಿದ್ದಾರೆ.

‘ಚುನಾವಣೆಗಳಲ್ಲಿ ತಮ್ಮ ಪಾತ್ರ ಬಂದಾಗ ಕಾಂಗ್ರೆಸ್‌ ವಿರೋಧಿ ಧೋರಣೆ ಅನುಸರಿಸುವ ಕೆಲವು ಸಮುದಾಯಗಳು, ಅಧಿಕಾರ ಹಂಚಿಕೆ, ಆಡಳಿತದಲ್ಲಿ, ಶಿಕ್ಷಣದಲ್ಲಿ ಮೀಸಲಾತಿ ಬಂದಾಗ ಸಿಂಹಪಾಲು ಕಬಳಿಸಲು ಮುಂದಾಗುವುದು ಎಲ್ಲಿಯವರೆಗೆ? ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ವರ್ಗಗಳ ಸಮುದಾಯದ ಜನರಿಗೆ ಅವರ ಸಂಖ್ಯೆಗೆ ಅನುಗಣವಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಹಿಂದುಳಿದಿರುವಿಕೆಗೆ ಪೂರಕವಾಗಿ ಹಕ್ಕು, ಪಾಲು ನೀಡಬೇಕು. ಅದಕ್ಕಾಗಿ ಜಾತಿವಾರು ಜನಗಣತಿ ವರದಿಯನ್ನು ಬಳಸಿಕೊಳ್ಳಬೇಕು. ಈ ಬಗ್ಗೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲೇ ಭರವಸೆ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.