ADVERTISEMENT

ಪ್ರತಿ ಟನ್‌ ಕಬ್ಬಿಗೆ ಕಾರ್ಖಾನೆ ₹3,300, ಸರ್ಕಾರ ₹200 ನೀಡಲಿ: ಬೊಮ್ಮಾಯಿ ಸಲಹೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 14:17 IST
Last Updated 5 ನವೆಂಬರ್ 2025, 14:17 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಪ್ರತಿ ಟನ್‌ ಕಬ್ಬಿಗೆ ₹3,500 ದರ ಸಿಗುವಂತೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶಿಸಬೇಕು. ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್‌ ಕಬ್ಬಿಗೆ ₹3,300 ಹಾಗೂ ರಾಜ್ಯ ಸರ್ಕಾರ ₹200 ನೀಡಬೇಕು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಕಬ್ಬು ಬೆಳೆಗಾರರು ನ್ಯಾಯ ಸಮ್ಮತ ಬೆಲೆ ನಿಗದಿ ಆಗಬೇಕೆಂದು ನಡೆಸುತ್ತಿರುವ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ. ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತಿದ್ದಾರೆ. ರೈತರ ಸಮಸ್ಯೆ ಬಗೆಹರಿಸಲು ಅವರಿಗೆ ಪುರುಸೊತ್ತಿಲ್ಲ ಎಂದು ಹೇಳಿದ್ದಾರೆ.

ಸಕ್ಕರೆ ಮತ್ತು ಇತರ ಉಪ ಉತ್ಪನ್ನಗಳ ಮೂಲಕ ಸರ್ಕಾರಕ್ಕೆ ₹27,000 ಕೋಟಿ ಆದಾಯ ಬರುತ್ತದೆ. ಇದರಲ್ಲಿ ಪ್ರತಿ ಟನ್‌ಗೆ ₹200 ನೀಡಬಹುದು. ಸಕ್ಕರೆ ಕಾರ್ಖಾನೆ ಮಾಲೀಕರು ₹3,300 ನೀಡಬೇಕು. ಇದರಿಂದ ಪ್ರತಿ ಟನ್‌ಗೆ ₹3,500 ದರ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಕಾರ್ಖಾನೆಗಳು ಸಕ್ಕರೆ ಜೊತೆಗೆ ವಿದ್ಯುತ್‌ ಉತ್ಪಾದನೆ ಕೂಡ ಮಾಡುತ್ತಿವೆ. ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಪಿಪಿಎ ಒಪ್ಪಂದ ಆಗಿದೆ. ಅಲ್ಲಿ ಕಾರ್ಖಾನೆ ಮಾಲೀಕರಿಗೆ ಪ್ರತಿ ಯುನಿಟ್‌ಗೆ ₹5.5 ಸಿಗುತ್ತದೆ. ಅದೇ ರೀತಿ ರಾಜ್ಯದಲ್ಲಿ ಒಪ್ಪಂದ ಮಾಡಿಕೊಂಡರೆ ಈಗ ನೀಡುತ್ತಿರುವ ಪ್ರತಿ ಯುನಿಟ್‌ಗೆ ₹3 ರ ಬದಲು ₹5.5 ದೊರೆಯುತ್ತದೆ. ಇದರಿಂದ ಕಬ್ಬಿಗೆ ಹೆಚ್ಚಿಗೆ ದರ ಕೊಡಲು ಸಾಧ್ಯವಿದೆ. ಆದ್ದರಿಂದ ಸರ್ಕಾರ ತನಗಿರುವ ಅಧಿಕಾರ ಚಲಾವಣೆ ಮಾಡಿ, ಕಬ್ಬಿನ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ, ದರ ಪಟ್ಟಿಯನ್ನು ರೈತರ ನ್ಯಾಯ ಸಮ್ಮತ ಬೇಡಿಕೆಯಂತೆ ₹3,500ಕ್ಕೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.