ADVERTISEMENT

ಐಎಎಸ್‌ ಅಧಿಕಾರಿ ವಿರುದ್ಧ ಕ್ರಮಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 13:49 IST
Last Updated 19 ಆಗಸ್ಟ್ 2025, 13:49 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯರ ಜತೆಗೆ ಸರಿಯಾಗಿ ವರ್ತಿಸದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ ಆರ್‌. ಗಿರೀಶ್‌ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರಕ್ಕೆ ಸೂಚಿಸಿದರು.

ಬಿಜೆಪಿಯ ವೈ.ಎಂ.ಸತೀಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಲ್ಯಾಟರೈಟ್‌ ಕಲ್ಲಿನ ಗಣಿಗಳ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಪ್ರಶ್ನೆ ಕೇಳಿದರು. ಗಣಿ ಸಚಿವರ ಪರವಾಗಿ ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಉತ್ತರಿಸಿದರು.

ಉತ್ತರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಅವರು, ‘ಈ ಬಗ್ಗೆ ವಿವರಣೆ ಕೇಳಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ನಾಲ್ಕು ಪತ್ರ ಬರೆದಿದ್ದೇನೆ. ಆದರೆ ಒಂದಕ್ಕೂ ಅವರು ಉತ್ತರ ನೀಡಿಲ್ಲ. ಬದಲಿಗೆ ಒಮ್ಮೆ ಭೇಟಿಗೆ ಹೋಗಿದ್ದಾಗ, ಕೈಸನ್ನೆ ಮಾಡಿ ಬಾ ಎಂದು ಕರೆಯುತ್ತಾರೆ. ವಿಧಾನ ಪರಿಷತ್ತಿನ ಸದಸ್ಯರಿಗೆ ಅಧಿಕಾರಿಯೊಬ್ಬರು ಗೌರವ ಕೊಡುವ ರೀತಿಯೇ ಇದು’ ಎಂದು ಪ್ರಶ್ನಿಸಿದರು.

ADVERTISEMENT

ಚಲುವರಾಯಸ್ವಾಮಿ ಅವರು, ‘ಚುನಾಯಿತ ಸದಸ್ಯರು ಮಾತ್ರವಲ್ಲ, ಜನ ಸಾಮಾನ್ಯರನ್ನೂ ಅಧಿಕಾರಿಗಳು ಈ ರೀತಿ ನಡೆಸಿಕೊಳ್ಳಬಾರದು. ಸಂಬಂಧಿತ ಸಚಿವರ ಗಮನಕ್ಕೆ ಈ ವಿಷಯ ತಂದು, ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು’ ಎಂದರು.

ಆಗ ಹೊರಟ್ಟಿ ಅವರು, ‘ಅಧಿಕಾರಿಯ ಹೆಸರೇನು’ ಎಂದು ಪ್ರಶ್ನಿಸಿದರು. ಸತೀಶ್ ಅವರು, ‘ಆರ್‌.ಗಿರೀಶ್‌’ ಎಂದು ಹೇಳಿದರು. ಹೊರಟ್ಟಿ ಅವರು, ‘ಅವರು ಯಾರಾದರೂ ಆಗಿರಲಿ, ಸದಸ್ಯರಿಗೆ ಅಗೌರವ ತೋರಿದ್ದಕ್ಕೆ ಶಿಸ್ತುಕ್ರಮ ತೆಗೆದುಕೊಳ್ಳಿ’ ಎಂದು ಚಲುವರಾಯಸ್ವಾಮಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.