ಕಗ್ಗೋಡ (ವಿಜಯಪುರ): ‘ನೂತನ ಸಚಿವರು ಇಂಥದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿಯಬಾರದು. ಕೊಟ್ಟ ಖಾತೆ ನಿಭಾಯಿಸಬೇಕು. ಆದರೆ ನನಗೆ ಶಿಕ್ಷಣ ಖಾತೆಯನ್ನೇ ಕೊಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.
‘ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಹದಗೆಟ್ಟಿದೆ. ಇದನ್ನು ಸುಧಾರಿಸಬೇಕು. ಆದ್ದರಿಂದ ನನಗೆ ಶಿಕ್ಷಣ ಖಾತೆಯನ್ನೇ ನೀಡಿ ಎಂದು ಆಗ್ರಹಿಸುವೆ’ ಎಂದು ಬುಧವಾರ ಇಲ್ಲಿ ನಡೆದಿರುವ ಭಾರತೀಯ ಸಂಸ್ಕೃತಿ ಉತ್ಸವ–5ರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರಿಗೆ ತಿಳಿಸಿದರು.
‘ನನಗೆ ಶಿಕ್ಷಣ ಖಾತೆ ನೀಡಿದರೆ ಶಿಕ್ಷಣ ಕ್ಷೇತ್ರವನ್ನು ನೂರಕ್ಕೆ ನೂರರಷ್ಟು ಸುಧಾರಿಸುವೆ. ನನ್ನನ್ನು ಸಚಿವನನ್ನಾಗಿ ಮಾಡದಿದ್ದರೂ; ಬಂಡಾಯದ ಕಹಳೆ ಊದಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಕಹಳೆ ಊದುವುದನ್ನು ನಿಲ್ಲಿಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಹೊರಟ್ಟಿ ಉತ್ತರಿಸಿದರು.
‘ಎಚ್.ಡಿ.ಕುಮಾರಸ್ವಾಮಿ ದೇವರಲ್ಲ. ಅವ್ರೂ ಮನುಷ್ಯನೇ. ಭಾವನಾತ್ಮಕವಾಗಿ ಮಾತನಾಡುವ ಸ್ವಭಾವ. ನೋವಿನಿಂದ ಶೂಟೌಟ್ ನಡೆಸಿ ಎಂದಿದ್ದಾರಷ್ಟೇ’ ಎಂದು ಮುಖ್ಯಮಂತ್ರಿಯ ಶೂಟೌಟ್ ಹೇಳಿಕೆ ಸಮರ್ಥಿಸಿಕೊಂಡರು.
‘ಬೆಳಗಾವಿಯಲ್ಲಿ ಸುವರ್ಣಸೌಧವನ್ನು ಗೋದಾಮಿನ ರೀತಿ ನಿರ್ಮಿಸಿದ್ದಾರೆ. ಅಲ್ಲಿ ಕಸ ಹೊಡೆಯುವವರು ದಿಕ್ಕಿಲ್ಲವಾಗಿದ್ದಾರೆ. ಇದೂವರೆಗೂ ಆಳಿದ ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವೆ’ ಎಂದು ಹೊರಟ್ಟಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.