ಬೆಂಗಳೂರು: ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ಮುಚ್ಚುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಗುಂಡಿ ಮತ್ತು ಮಳೆ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ‘ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕ ರಸ್ತೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಆಯಾ ವಲಯ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಗುಂಡಿ ರಹಿತ ಮಾಡಬೇಕು’ ಎಂದರು.
ಈವರೆಗೆ ಗುರುತಿಸಿರುವ ಗುಂಡಿಗಳನ್ನು ಕೂಡಲೇ ಮುಚ್ಚಲು ವಲಯಗಳ ಮುಖ್ಯ ಎಂಜಿನಿಯರ್‌ಗಳು ಪಾಲಿಕೆಯ ಬಿಸಿ ಡಾಂಬರು ಜಲ್ಲಿ ಮಿಶ್ರಣ ಘಟಕದ ಜತೆ ಸಮನ್ವಯ ಸಾಧಿಸಿ ಅಗತ್ಯ ಡಾಂಬರ್ ಪಡೆಯಬೇಕು ಎಂದು ಸೂಚಿಸಿದರು.
ಆ ಘಟಕದಿಂದ ಬರುವ ಡಾಂಬರ್ ಪ್ರಮಾಣವನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಜತೆಗೆ ಗುಣಮಟ್ಟ ಕಾಪಾಡಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಗುಂಡಿ ಬಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಹಸಿ ಜೆಲ್ಲಿ ಮಿಶ್ರಣ ಹಾಕಿದ ನಂತರವೇ ಡಾಂಬರ್ ಹಾಕಬೇಕು. ಈ ಕಾರ್ಯವನ್ನು ಹಗಲು-ರಾತ್ರಿ ಖುದ್ದು ಪರಿಶೀಲನೆ ನಡೆಸಬೇಕು ಎಂದು ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರಿಗೆ ತಿಳಿಸಿದರು.
ಬಿಸಿ ಡಾಂಬರ್ ಜಲ್ಲಿ ಮಿಶ್ರಣ ಘಟಕದಿಂದ ಎಲ್ಲ ವಲಯಗಳಿಗೂ ಪ್ರತಿನಿತ್ಯ 25 ಲಾರಿ ಲೋಡ್‌ಗಳಷ್ಟು ಡಾಂಬರ್ ಕಡ್ಡಾಯವಾಗಿ ಕಳುಹಿಸಬೇಕು. ಅದನ್ನು ವಲಯ ಆಯುಕ್ತರು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚನೆ ನೀಡಿದರು.
‘ಜಲಮಂಡಳಿ, ಬೆಸ್ಕಾಂ, ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯ(ಗೇಲ್) ಸೇರಿ ಬೇರೆ ಬೇರೆ ಇಲಾಖೆಗಳ ಕಾಮಗಾರಿಗಳಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಸಾರ್ವಜನಿಕ ಸ್ಥಳ, ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿ ಹಾಕಲಾಗುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ರೀತಿಯ ಸ್ಥಳಗಳನ್ನು ಗುರುತಿಸಿ ಕೂಡಲೇ ಪಾಲಿಕೆಯ ವಶಕ್ಕೆ ಪಡೆಯಬೇಕು. ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು’ ಎಂದು ತಿಳಿಸಿದರು.
ನಗರದಲ್ಲಿ 72 ಪ್ರವಾಹ ತಾಣ:ನಗರದಲ್ಲಿ ಗುರುತಿಸಿರುವ 72 ಪ್ರವಾಹ ತಾಣಗಳ ಪೈಕಿ 27 ಅತಿ ಸೂಕ್ಷ್ಮ ಹಾಗೂ 45 ಸೂಕ್ಷ್ಮ ತಾಣಗಳಿವೆ. ಆ ಪ್ರದೇಶದಲ್ಲಿ ಪ್ರವಾಹ ಆಗದಂತೆ ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕು. ರಾಜಕಾಲುವೆಗಳನ್ನು ಸಂಪೂರ್ಣವಾಗಿ ಹೂಳೆತ್ತುವ ಕಾರ್ಯ ಆಗಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಮರಳು ಮೂಟೆಗಳನ್ನು ಲಭ್ಯ ಇಟ್ಟುಕೊಳ್ಳಬೇಕು. ಪರ್ಯಾಯ ಮಾರ್ಗದಲ್ಲಿ ನೀರು ಹರಿದು ಹೋಗಲು ಪೈಪ್ ಅಳವಡಿಸಬೇಕು ಎಂದು ತುಷಾರ್ ಗಿರಿನಾಥ್ ಅವರು ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಸೂಚನೆ ನೀಡಿದರು.
ಪಾಲಿಕೆಯ ಎಲ್ಲಾ ವಾರ್ಡ್‌ಗಳಲ್ಲೂ ರಸ್ತೆ ಬದಿ ಚರಂಡಿಗಳಲ್ಲಿ ಹೂಳೆತ್ತುವ ಕೆಲಸ ಮಾಡಬೇಕು. ರಸ್ತೆ ಬದಿ ಸಂಗ್ರಹವಾಗಿರುವ ಮಣ್ಣು, ಮಳೆ ನೀರು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆಗಳ ಮೇಲೆ ಬೀಳುವ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ರಸ್ತೆಗಳಲ್ಲಿ ನೀರು ನಿಲ್ಲುವ ಬಗ್ಗೆ ಸಂಚಾರ ಪೊಲೀಸರು ನೀಡಿರುವ ಮಾಹಿತಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.