ADVERTISEMENT

ನಮ್ಮ ಬದುಕು ಬೀದಿಗೆ ಬಿದ್ದಿದೆ...

ಹೈಕೋರ್ಟ್‌ಗೆ ಜಾಹಿರಾತು ಕಂಪನಿಗಳ ಅಳಲು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:18 IST
Last Updated 17 ಡಿಸೆಂಬರ್ 2018, 20:18 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಎಲ್ಲ ರೀತಿಯ ಜಾಹಿರಾತುಗಳನ್ನು ನಿಷೇಧಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮವು, ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಜಾಹಿರಾತುದಾರ ಕಂಪನಿಗಳು ಹೈಕೋರ್ಟ್‌ಗೆ ಮೊರೆ ಇಟ್ಟಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆ ಗುಂಡಿ ಮುಚ್ಚುವ ಹಾಗೂ ಅನಧಿಕೃತ ಫ್ಲೆಕ್ಸ್, ಹೋರ್ಡಿಂಗ್ಸ್ ಮತ್ತು ಬ್ಯಾನರ್‌ ತೆರವುಗೊಳಿಸುವ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಜಾಹೀರಾತುದಾರ ಕಂಪನಿಗಳ ಪರ ವಾದ ಮಂಡಿಸಿದ ವಕೀಲ ಪ್ರೊ. ರವಿವರ್ಮ ಕುಮಾರ್, ‘ಜಾಹೀರಾತು ಫಲಕಗಳ ನಿಷೇಧದಿಂದ ಈ ಉದ್ಯಮ ನೆಚ್ಚಿ ಕೊಂಡಿರುವ ನಗರ ವ್ಯಾಪ್ತಿಯಲ್ಲಿನ 1.50 ಲಕ್ಷ ಕುಟುಂಬಗಳು ಬೀದಿಗೆ ಬಿದ್ದಿವೆ’ ಎಂದರು.

ADVERTISEMENT

‘ನಗರದಲ್ಲಿ 2 ಸಾವಿರ ಜಾಹೀರಾತು ಸಂಸ್ಥೆಗಳಿವೆ. ಆರು ತಿಂಗಳಿಂದ ವಹಿ ವಾಟು ಸ್ಥಗಿತಗೊಂಡಿರುವುದರಿಂದ ಉದ್ಯಮದಲ್ಲಿ ತೊಡಗಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆ ದುಸ್ತರವಾಗಿದೆ. ಮಕ್ಕಳ ಶಿಕ್ಷಣ ನಿಂತು ಹೋಗಿದೆ’ ಎಂದರು.

‘ಜಾಹೀರಾತು ಪ್ರದರ್ಶನ ಸಂವಿಧಾನದ 19 (1) (ಎ) ವಿಧಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ವಾಪ್ತಿಗೆ ಒಳಪಡುತ್ತದೆ. ಹೀಗಿರುವಾಗ ಜಾಹೀರಾತು ಪ್ರದರ್ಶನ ನಿಷೇಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಅರ್ಜಿದಾರರು ಜಾಹೀರಾತು ಫಲಕ ಪ್ರದರ್ಶಿಸಲು ಕಾನೂನು ಬದ್ಧ ಪರವಾನಗಿ ಪಡೆದುಕೊಂಡಿದ್ದಾರೆ. ಇವರು ಅಳವಡಿಸಿರುವ ಫಲಕಗಳು ಖಾಸಗಿ ಸ್ಥಿರಾಸ್ತಿಗಳ ಆವರಣದಲ್ಲಿವೆ. ಅರ್ಜಿದಾರರು ಕಾಲಕಾಲಕ್ಕೆ ತೆರಿಗೆ, ಶುಲ್ಕಗಳನ್ನು ನಿಯಮಿತವಾಗಿ ಪಾವತಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಬಿಬಿಎಂಪಿ ಕೌನ್ಸಿಲ್ ನಿರ್ಣಯದಂತೆ ಜಾಹೀರಾತು ನಿಷೇಧಿಸಲಾಗಿದೆ. ಕೌನ್ಸಿಲ್ ಸಭೆಯ ನಿರ್ಣಯ ಹಾಗೂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನೇ ನೆಪ ಮಾಡಿಕೊಂಡು ಬಿಬಿಎಂಪಿ ನಮ್ಮ ಕಕ್ಷಿದಾರರ ಜಾಹಿರಾತು ಫಲಕಗಳನ್ನು ತೆರವುಗೊಳಿಸುತ್ತಿದೆ’ ಎಂದು ಹೇಳಿದರು.

‘ಜಾಹೀರಾತು ಕಂಪನಿಗಳಿಗೆ ದೀಪಾವಳಿ ಮತ್ತು ದಸರಾ ಹಬ್ಬಗಳು ವಾರ್ಷಿಕ ವ್ಯಾಪಾರದ ಸಂದರ್ಭ. ಆದರೆ, ಬಿಬಿಎಂಪಿಯ ಕ್ರಮದಿಂದ ಈ ಎರಡೂ ಅವಕಾಶ ಈಗಾಗಲೇ ತಪ್ಪಿಹೋಗಿವೆ. ಇಡೀ ವರ್ಷ ನಷ್ಟ ಅನುಭವಿಸುವಂತಾಗಿದೆ. ಆದ್ದರಿಂದ, ಕನಿಷ್ಠ ಕ್ರಿಸ್‌ಮಸ್ ಹಬ್ಬಕ್ಕಾದರೂ ಜಾಹಿರಾತು ಪ್ರದರ್ಶನಕ್ಕೆ ಅನುಮತಿ ನೀಡಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ತನಿಖೆ ಪೂರ್ಣ: ‘ಕರ್ನಾಟಕ ಮುಕ್ತ ಪ್ರದೇಶ ಕಾಯ್ದೆಯಡಿ ತನಿಖಾ ಹಂತದಲ್ಲಿ ಬಾಕಿ ಇದ್ದ 258 ಪ್ರಕರಣಗಳ ಪೈಕಿ 256 ಪ್ರಕರಣಗಳ ತನಿಖೆ ಪೂರ್ಣಗೊಳಿಸಲಾಗಿದೆ’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು. ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ಡಿ.18) ಮುಂದೂಡಿದೆ.

ರಾತ್ರಿ ಹೊತ್ತಲ್ಲಿ ತ್ಯಾಜ್ಯ ಸುರಿಯುತ್ತಾರೆ’

‘ಪ್ರತಿಷ್ಠಿತ ವಾಣಿಜ್ಯ ಪ್ರದೇಶಗಳಲ್ಲಿನ ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು ಮಧ್ಯರಾತ್ರಿ ಮ್ಯಾನ್‌ಹೋಲ್‌ ಮುಚ್ಚಳ ತೆರೆದು ತ್ಯಾಜ್ಯಗಳನ್ನು ಸುರಿಯುತ್ತಿವೆ. ಇದು ಪೈಪ್‌ಲೈನ್‌ಗಳ ಸರಾಗ ಕಾರ್ಯನಿರ್ವಹಣೆಗೆ ಸಮಸ್ಯೆಯಾಗಿದೆ’ ಎಂಬ ಅಂಶವನ್ನು ಜಲಮಂಡಳಿ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೂ ಮುನ್ನ ಬಿಬಿಎಂಪಿ ಪರ ವಕೀಲರು ಮಹದೇವಪುರ ವಲಯದ ಕಾರ್ಯಪ್ರಗತಿ ವರದಿಯನ್ನು ನ್ಯಾಯಪೀಠಕ್ಕೆ ಮಂಡಿಸಿ, ‘ರಸ್ತೆ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಂಡಿದೆ. ಆದರೆ, ಜಲಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ), ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಲ್), ಸರ್ಕಾರಿ ಸ್ವಾಮ್ಯದ ಭಾರತೀಯ ಅನಿಲ ಪ್ರಾಧಿಕಾರ (ಜಿಎಐಎಲ್) ಕಾಮಗಾರಿಗಳಿಂದ ಕೆಲವೊಂದು ಪ್ರದೇಶಗಳಲ್ಲಿ ಹಿನ್ನೆಡೆಯಾಗಿದೆ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಲಮಂಡಳಿ ಪರ ವಕೀಲರು, ‘ಬಿಬಿಎಂಪಿಯ ಎಲ್ಲ ದೂರುಗಳನ್ನು ಸರಿಪಡಿಸಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ. ಬೊಮ್ಮನಹಳ್ಳಿ ವಲಯವನ್ನು ಇದೇ 20ರೊಳಗೆ ಸಂಪೂರ್ಣ ರಸ್ತೆ ಗುಂಡಿಗಳಿಂದ ಮುಕ್ತಗೊಳಿಸಿ’ ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.