ADVERTISEMENT

ಬಿಬಿಎಂಪಿ 198 ವಾರ್ಡ್‌ಗಳಿಗೇ ಚುನಾವಣೆ?

ಸಮಿತಿ ರಚಿಸಿ ಒಂದೂವರೆ ವರ್ಷದ ಬಳಿಕವೂ ಆಗಿಲ್ಲ 243 ವಾರ್ಡ್‌ಗಳ ಮರುವಿಂಗಡಣೆ

ಪ್ರವೀಣ ಕುಮಾರ್ ಪಿ.ವಿ.
Published 10 ಮೇ 2022, 21:57 IST
Last Updated 10 ಮೇ 2022, 21:57 IST
   

ಬೆಂಗಳೂರು: ಚುನಾವಣೆ ಮುಂದೂಡುವ ಮೂಲಕ ಯಾವುದೇ ಸ್ಥಳೀಯ ಸಂಸ್ಥೆಗಳಲ್ಲೂ ನಿರ್ವಾತ ಸೃಷ್ಟಿಯಾಗಲು ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಿರುವ ಸುಪ್ರೀಂ ಕೋರ್ಟ್‌, ಚುನಾಯಿತ ಕೌನ್ಸಿಲ್‌ ಆಡಳಿತವಿಲ್ಲದ ಸ್ಥಳೀಯ ಸಂಸ್ಥೆಗಳಿಗೂ ತಕ್ಷಣವೇ ಚುನಾವಣೆ ನಡೆಸುವಂತೆ ಆಯಾ ರಾಜ್ಯಗಳ ಚುನಾವಣಾ ಆಯೋಗಗಳಿಗೆ ನಿರ್ದೇಶನ ನೀಡಿದೆ. ಆದರೆ, ಬಿಬಿಎಂಪಿಗೆ ಚುನಾವಣೆ ನಡೆಸುವ ವಿಚಾರದಲ್ಲಿ ರಾಜ್ಯ ಚುನಾವಣಾ ಆಯೋಗವೂ ಇಕ್ಕಟ್ಟಿನ ಸಂದರ್ಭವನ್ನು ಎದುರಿಸುತ್ತಿದೆ.

2020ರ ಸೆ. 10ರ ಒಳಗೆ ಬಿಬಿಎಂಪಿಗೆ ಚುನಾವಣೆ ಪೂರ್ಣಗೊಳ್ಳಬೇಕಿತ್ತು. ಆದರೆ, ಇನ್ನೂ ಚುನಾವಣೆ ನಡೆದಿಲ್ಲ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ತಕ್ಷಣವೇ ಚುನಾವಣೆ ನಡೆಸುವುದು ಅನಿವಾರ್ಯವಾದರೆ ಈ ಹಿಂದಿನಂತೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಗೊಂದಲ ಏನು?: ಪ್ರಸ್ತುತ ಬಿಬಿಎಂಪಿಯಲ್ಲಿ 1976ರ ಕೆಎಂಸಿ ಕಾಯ್ದೆ ಪ್ರಕಾರ ಆಡಳಿತ ನಡೆಯುತ್ತಿಲ್ಲ. 2020ರ ಬಿಬಿಎಂಪಿ ಕಾಯ್ದೆಯನ್ನು ಸರ್ಕಾರ 2021ರ ಜನವರಿಯಿಂದ ಜಾರಿಗೊಳಿಸಿದೆ. ಹೊಸ ಕಾಯ್ದೆ ಪ್ರಕಾರ ಸರ್ಕಾರ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಿದೆ. ಆದರೆ, ಅದರ ಪ್ರಕಾರ ವಾರ್ಡ್‌ಗಳ ಮರುವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ.

ADVERTISEMENT

ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಬಗ್ಗೆ ನಗರಾಭಿವೃದ್ಧಿ ಇಲಾಖೆಯು 2020ರ ಅ. 14ರಂದು ಮೊದಲ ಸಲ ಅಧಿಸೂಚನೆಯನ್ನೂ ಹೊರಡಿಸಿತ್ತು. ಈ ಕುರಿತು ವರದಿ ನೀಡಲು ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಅದೇ ಸಂದರ್ಭದಲ್ಲಿ ಸಮಿತಿಯನ್ನೂ ರಚಿಸಿತ್ತು. 2020ರ ಬಿಬಿಎಂಪಿ ಕಾಯ್ದೆ ಜಾರಿಯಾದ ಬಳಿಕ ಸರ್ಕಾರ ವಾರ್ಡ್‌ ಮರುವಿಂಗಡಣಾ ಸಮಿತಿ ರಚನೆ
ಬಗ್ಗೆ 2021ರ ಜ. 29ರಂದು ಪರಿಷ್ಕೃತ ಆದೇಶ ಪ್ರಕಟಿಸಿತು. 2022ರ ಜನವರಿಯಲ್ಲಿ ಸಮಿತಿಯ ಅವಧಿ ಕೊನೆಗೊಂಡಿದೆ. ಈ ಸಮಿತಿ ವಾರ್ಡ್‌ ಮರುವಿಂಗಡಣೆಯ ವರದಿಯನ್ನೂ ಸಲ್ಲಿಸಿಲ್ಲ. ಸಮಿತಿಯ ಅವಧಿಯನ್ನೂ ಸರ್ಕಾರ ಮುಂದುವರಿಸಿಲ್ಲ.

ಈಗ ಬಿಬಿಎಂಪಿ ಚುನಾವಣೆ ನಡೆಸುವ ಕುರಿತು ಎದುರಾಗಿರುವ ಬಿಕ್ಕಟ್ಟನ್ನು ಎದುರಿಸುವ ಬಗ್ಗೆ ಚರ್ಚಿಸಲು ರಾಜ್ಯ ಚುನಾವಣಾ ಆಯೋಗವು ಕಾನೂನು ತಜ್ಞರ ಜೊತೆ ಬುಧವಾರ ಸಭೆ ನಡೆಸಲು ನಿರ್ಧರಿಸಿದೆ.

‘ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಪಾಲಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಕೌನ್ಸಿಲ್‌ಗಳ ಅವಧಿ ಮುಗಿಯುವ ಮುನ್ನವೇ ಚುನಾವಣೆ ನಡೆಸುವುದಕ್ಕೆ ಆಯೋಗ ಬದ್ಧವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾರ್ಡ್‌ ಮರುವಿಂಗಡಣೆ
ಪ್ರಕ್ರಿಯೆಗಳನ್ನು ಚುನಾಯಿತ ಕೌನ್ಸಿಲ್‌ನ ಅಧಿಕಾರದ ಅವಧಿ ಮುಗಿಯುವ ಒಂದು ವರ್ಷ ಮುನ್ನವೇ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನವಿದೆ. ಆಯೋಗವು ಸಾಕಷ್ಟು ಬಾರಿ ಪತ್ರ ಬರೆದರೂ ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆಯನ್ನು ಸರ್ಕಾರ ನಡೆಸಿರಲಿಲ್ಲ. ಅದನ್ನು ಪ್ರಶ್ನಿಸಿ ನಾವೇ 2020ರಲ್ಲಿ ಹೈಕೋರ್ಟ್‌ ಮೊರೆ ಹೋಗಿದ್ದೆವು. ಹೈಕೋರ್ಟ್‌ ಆದೇಶಿಸಿದ ಬಳಿಕವಷ್ಟೇ ಸರ್ಕಾರ 198 ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ 2020ರ ಜುಲೈನಲ್ಲಿ ವರದಿ ನೀಡಿತ್ತು. ಮೀಸಲಾತಿಯ ಕರಡು ಸಿದ್ಧಪಡಿಸಿತ್ತು. ಆದರೆ, ಆ ಕುರಿತು ಅಂತಿಮ ವರದಿಯನ್ನು ಸಲ್ಲಿಸಿಲ್ಲ’ಎಂದು ಅವರು ತಿಳಿಸಿದರು.

‘ನಾವು 198 ವಾರ್ಡ್‌ಗಳಿಗೆ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿರುವಾಗಲೇ ಸರ್ಕಾರ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲು ಕ್ರಮಕೈಗೊಂಡಿತು. ಆದರೆ, ಈ ಹಿಂದೆ ನಿರ್ಧರಿಸಿದಂತೆ 198 ವಾರ್ಡ್‌ಗಳನ್ನೇ ಉಳಿಸಿಕೊಂಡು ಚುನಾವಣೆ ನಡೆಸುವಂತೆ ಹೈಕೋರ್ಟ್‌ ಸೂಚಿಸಿತ್ತು. ಅದಕ್ಕೆ ಸರ್ಕಾರ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿತ್ತು. ತಡೆಯಾಜ್ಞೆ ತೆರವು
ಗೊಳಿಸುವಂತೆ ನಾವು ಕೋರಿದ್ದೆವು. ಚುನಾವಣೆ ನಡೆಸುವಂತೆ ಈಗ ಸ್ವತಃ ಸುಪ್ರೀಂ ಕೋರ್ಟ್‌ ಹೇಳಿದೆ’ ಎಂದು ಹೇಳಿದರು.

‘ಚುನಾವಣಾ ಆಯೋಗದ ತೀರ್ಮಾನವೇ ಅಂತಿಮ’

‘ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಬಿಬಿಎಂಪಿ ಚುನಾವಣೆಗೆ ನಡೆಸುವ ವಿಚಾರದಲ್ಲಿ ರಾಜ್ಯ ಚುನಾವಣಾ ಆಯೋಗದ ತೀರ್ಮಾನವೇ ಅಂತಿಮ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ. ಆಯೊಗವು ಚುನಾವಣೆ ನಡೆಸಲು ತೀರ್ಮಾನಿಸಿದರೆ ಸಹಕಾರ ನೀಡಲೇ ಬೇಕಾಗುತ್ತದೆ’ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

‘ಸುಪ್ರೀಂ ಕೋರ್ಟ್‌ನಿಂದ ಯಾವೆಲ್ಲ ಸ್ಪಷ್ಟೀಕರಣಗಳನ್ನು ಚುನಾವಣಾ ಆಯೋಗವು ಬಯಸಿತ್ತೋ ಅದೆಲ್ಲದಕ್ಕೂ ಮಂಗಳವಾರದ ಆದೇಶದಲ್ಲಿ ಸ್ಪಷ್ಟ ಉತ್ತರ ಸಿಕ್ಕಿದೆ. ಹಾಗಾಗಿ ಆಯೋಗವು ಚುನಾವಣೆಗೆ ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ’ ಎಂದು ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.