ADVERTISEMENT

ಕಳಪೆ ಬಿತ್ತನೆ ಬೀಜ: ಆಂಧ್ರ ಮಾಫಿಯಾ ಕೈವಾಡ

​ಪ್ರಜಾವಾಣಿ ವಾರ್ತೆ
Published 7 ಮೇ 2020, 16:38 IST
Last Updated 7 ಮೇ 2020, 16:38 IST

ಬೆಂಗಳೂರು: ಆಂಧ್ರಪ್ರದೇಶದಿಂದ ಕಳಪೆ ಬಿತ್ತನೆ ಬೀಜ ತಂದು ರಾಜ್ಯದಲ್ಲಿ ಮಾರಾಟ ಮಾಡುವ ಮಾಫಿಯಾವನ್ನು ಪತ್ತೆ ಮಾಡಿ, ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

‘ಆಂಧ್ರದ ವ್ಯಕ್ತಿಗಳು ಅಲ್ಲಿ ತಿರಸ್ಕೃತಗೊಂಡ ಹತ್ತಿ, ಸೂರ್ಯಕಾಂತಿ, ಮುಸುಕಿನಜೋಳದ ಬಿತ್ತನೆ ಬೀಜಗಳನ್ನು ನಮ್ಮ ರಾಜ್ಯಕ್ಕೆ ತಂದು ಮಾರಾಟ ಮಾಡುತ್ತಿದ್ದರು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು 10 ಸಾವಿರ ಕ್ವಿಂಟಲ್‌ಗೂ ಹೆಚ್ಚು ಬಿತ್ತನೆ ಬೀಜವನ್ನು ವಶಕ್ಕೆ ತೆಗೆದುಕೊಂಡು, ಎಂಟು ಜನರ ವಿರುದ್ಧ ಕ್ರಿಮಿನಲ್‌ ಕೇಸ್‌ಗಳನ್ನು‌ ದಾಖಲಿಸಿಕೊಳ್ಳಲಾಗಿದೆ ಎಂದು ಪಾಟೀಲ ಹೇಳಿದರು.

ADVERTISEMENT

ಆರ್ಥಿಕ ಸಂಕಷ್ಟದ ಮಧ್ಯೆಯೂ ಮುಖ್ಯಮಂತ್ರಿಯವರು ಶ್ರಮಿಕರ ಬಗ್ಗೆ ಕಾಳಜಿವಹಿಸಿ ಪ್ಯಾಕೇಜ್‌ ಪ್ರಕಟಿಸಿದ್ದಾರೆ. ಹಣ್ಣು–ತರಕಾರಿ ಬೆಳೆಗಾರರಿಗೆ ಪ್ಯಾಕೇಜ್‌ ಪ್ರಕಟಿಸಲಿದ್ದಾರೆ. ಇಂತಿಷ್ಟೇ ಪರಿಹಾರ ನೀಡಿ ಅಂತ ಅವರನ್ನು ಒತ್ತಾಯ ಮಾಡುವುದಿಲ್ಲ. ಪರಿಹಾರ ಎನ್ನುವುದು ಪ್ರಾಣ ಬಿಡುವವನಿಗೆ ಜೀವ ಜಲ ನೀಡಿ ಉಳಿಸುವುದಕ್ಕೆ ಸಮ. ಎಲ್ಲರಿಗೂ ಬದುಕುವ ವ್ಯವಸ್ಥೆ ಆಗಬೇಕಿದ್ದು, ಅದನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಲಾಕ್‌ಡೌನ್‌ನಿಂದಾಗಿ ಹಣ್ಣು ತರಕಾರಿಗಳಿಗೆ ಬೇಡಿಕೆ ಕುಸಿದು ಹೋಗಿದೆ. ಶುಭ ಸಮಾರಂಭಗಳು ನಡೆಯುತ್ತಿಲ್ಲ. ಹೊಟೇಲ್‌ ಮತ್ತು ಜ್ಯೂಸ್‌‌ ಅಂಗಡಿಗಳು ತೆರೆಯದ ಕಾರಣ, ಹಣ್ಣುಗಳ ಮಾರಾಟ ಆಗುತ್ತಿಲ್ಲ. ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಯವರು ಪರಿಹಾರ ಪ್ರಕಟಿಸಲಿದ್ದಾರೆ ಎಂದರು.

‘ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ 30 ಜಿಲ್ಲೆಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ ವರದಿಯೊಂದನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದೇನೆ. ಪ್ಯಾಕೇಜ್ ಎಷ್ಟು ನೀಡಬೇಕು ಎಂಬುದು ಮುಖ್ಯಮಂತ್ರಿಯವರೇ ತೀರ್ಮಾನಿಸುತ್ತಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.