ADVERTISEMENT

ಬಿಡಿಎ: ಮತ್ತಷ್ಟು ಅಕ್ರಮಗಳು ಪತ್ತೆ

ಕೇಂದ್ರ ಕಚೇರಿ ಸೇರಿ ಐದು ಕಡೆ ಎಸಿಬಿ ಅಧಿಕಾರಿಗಳಿಂದ ಶೋಧ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 16:38 IST
Last Updated 23 ನವೆಂಬರ್ 2021, 16:38 IST
   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿ ಮತ್ತು ನಾಲ್ಕು ವಿಭಾಗ ಕಚೇರಿಗಳಲ್ಲಿ ಮೂರನೇ ದಿನವೂ ಶೋಧ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು, ಮತ್ತಷ್ಟು ಅಕ್ರಮಗಳನ್ನು ಪತ್ತೆ ಮಾಡಿದ್ದಾರೆ.

ಶುಕ್ರವಾರ ಮತ್ತು ಶನಿವಾರ ಬಿಡಿಎ ಕೇಂದ್ರ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಶೋಧ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಪುನಃ ಬಿಡಿಎ ಕೇಂದ್ರ ಕಚೇರಿ ಮತ್ತು ಆರ್‌.ಟಿ.ನಗರ, ವಿಜಯನಗರ, ಎಚ್‌.ಎಸ್.ಆರ್‌. ಬಡಾವಣೆ ಹಾಗೂ ಬನಶಂಕರಿಯಲ್ಲಿರುವ ಪ್ರಾಧಿಕಾರದ ವಿಭಾಗ ಕಚೇರಿ ಮೇಲೆ ದಾಳಿಮಾಡಿ, ಶೋಧ ನಡೆಸಿದರು.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ ಪರಿಹಾರ ಪಾವತಿಸಿರುವುದು, ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯಲ್ಲಿ ಭಾರತ್‌ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯಲ್ಲಿ ನಾಗರಿಕ ಮೂಲಸೌಕರ್ಯಕ್ಕೆ ಮೀಸಲಾದ (ಸಿ.ಎ) ನಿವೇಶನಗಳ ದುರ್ಬಳಕೆಗೆ ಅವಕಾಶ ನೀಡಿರುವುದು, ಎಚ್‌.ಎಸ್‌.ಆರ್‌. ಬಡಾವಣೆ ಮೂರನೇ ಸೆಕ್ಟರ್‌, ಮಹಾಲಕ್ಷ್ಮಿ ಬಡಾವಣೆಗಳಲ್ಲಿ ಸಿ.ಎ ನಿವೇಶನಗಳ ಬಳಕೆಯಲ್ಲಿ ಷರತ್ತು ಉಲ್ಲಂಘನೆಯಾಗಿದ್ದರೂ ಕ್ರಮ ಕೈಗೊಳ್ಳದಿರುವುದು ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕೆಲವು ಫಲಾನುಭವಿಗಳಿಗೆ ಹಂಚಿಕೆಯಾದ ಬಡಾವಣೆಯಲ್ಲಿ ನಿವೇಶನ ವಿತರಿಸದೇ ಇರುವುದು, ಹಳೆಯ ಬಡಾವಣೆಗಳಲ್ಲಿ ದೊಡ್ಡ ನಿವೇಶನಗಳಲ್ಲಿ ಹಂಚಿಕೆ ಮಾಡದೇ ಖಾಲಿ ಉಳಿಸಿಕೊಂಡಿದ್ದು, ಅಕ್ರಮವಾಗಿ ಶೆಡ್‌ಗಳ ನಿರ್ಮಾಣಕ್ಕೆ ಅವಕಾಶ ನೀಡಿರುವುದು ಕಂಡುಬಂದಿದೆ. ಮೂಲೆ ನಿವೇಶನಗಳನ್ನು ಹರಾಜಿನ ಮೂಲಕ ವಿಲೇವಾರಿ ಮಾಡದೆ ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ಮಾಹಿತಿ ನೀಡಿದೆ.

ಬಡಾವಣೆಗಳ ನಿರ್ಮಾಣಕ್ಕೆ ಜಮೀನು ನೀಡದ ವ್ಯಕ್ತಿಗಳಿಗೆ ರೈತರ ಹೆಸರಿನಲ್ಲಿ ಪರಿಹಾರ ಪಾವತಿಸಿರುವುದು, ಜಮೀನುಗಳ ಮಾಲೀಕರ ಹೆಸರಿನಲ್ಲಿ ಅನ್ಯ ವ್ಯಕ್ತಿಗಳಿಗೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆ ಮಾಡಿರುವುದನ್ನು ತನಿಖಾ ತಂಡ ಪತ್ತೆಮಾಡಿದೆ. ಪ್ರಾಧಿಕಾರದ ವಿಭಾಗ ಕಚೇರಿಗಳಲ್ಲಿ ಕಡತಗಳ ಸಂಖ್ಯೆಯ ಆಧಾರದಲ್ಲಿ ಖಚಿತ ಅಳತೆಯ ದಾಖಲೆಯನ್ನು ನಿರ್ವಹಣೆ ಮಾಡದಿರುವುದನ್ನೂ ಗುರುತಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ನಡೆದ ಭೂಸ್ವಾಧೀನ ಪ್ರಕ್ರಿಯೆಯಲ್ಲೂ ಅಕ್ರಮ ಎಸಗಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ. ಜಮೀನು ನೀಡಿದ ವ್ಯಕ್ತಿಯ ಬದಲಿಗೆ ಮೂರನೇ ವ್ಯಕ್ತಿಗೆ ಪರಿಹಾರದ ಮೊತ್ತವನ್ನು ಪಾವತಿಸಿರುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ದೂರುಗಳ ಸುರಿಮಳೆ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ, ದುರಾಡಳಿತ, ಭ್ರಷ್ಟಾಚಾರದ ಕುರಿತು ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ಮೂರು ದಿನಗಳಲ್ಲಿ 40ಕ್ಕೂ ಹೆಚ್ಚು ದೂರುಗಳು ಬಂದಿವೆ. ಸಾರ್ವಜನಿಕರ ದೂರುಗಳನ್ನು ಆಧರಿಸಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.