ADVERTISEMENT

ಜೀವ ಉಳಿಸಲು ದೇವರೇ ಅಧಿಕಾರದಿಂದ ಕೆಳಗಿಳಿಸಿದ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 20:25 IST
Last Updated 1 ಜುಲೈ 2021, 20:25 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಬೆಂಗಳೂರು: ‘ನನ್ನನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ್ದು 17 ಜನರಲ್ಲ. ಇಂತಹ ಸಂದರ್ಭದಲ್ಲಿ ನನ್ನ ಜೀವ ಉಳಿಸುವುದಕ್ಕಾಗಿ ದೇವರೇ ನನ್ನನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿದ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್‌ ಸೇರಿದ ಹಾವೇರಿ ಜಿಲ್ಲೆಯ ಹಲವರನ್ನು ಗುರುವಾರ ಜೆಡಿಎಸ್‌ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸ್ವಾಗತಿಸಿದ ಬಳಿಕ ಮಾತನಾಡಿದ ಅವರು, ‘ನಾನು ಸಂತೋಷದಿಂದ ಅಧಿಕಾರ ಬಿಟ್ಟು ಹೊರಗೆ ಬಂದೆ. ಈ ಸಂದರ್ಭದಲ್ಲಿ ನನ್ನ ಜೀವ ಉಳಿಯಬೇಕು ಎಂದು ದೇವರೇ ತೆಗೆದುಕೊಂಡ ನಿರ್ಧಾರ ಅದು. ಆ 17 ಜನರು ನನ್ನ ಜೀವ ಉಳಿಸಿದ ಪುಣ್ಯಾತ್ಮರು ಅಂದುಕೊಳ್ಳುತ್ತೇನೆ. ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು.

ಅಧಿಕಾರಕ್ಕಾಗಿ ಕಚ್ಚಾಟ:ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಟ ಆರಂಭವಾಗಿದೆ. ಎಂಟು ಮಂದಿ ನಾಯಕರು ಮುಖ್ಯಮಂತ್ರಿ ಹುದ್ದೆಗಾಗಿ ಗರಿ ಗರಿ ಬಟ್ಟೆ ಹೊಲಿಸಿಕೊಂಡು ಸಿದ್ಧವಾಗಿದ್ದಾರೆ. ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವಿಧಾನಸಭೆಯಲ್ಲೇ ಘೋಷಿಸಿದ್ದ ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.

ADVERTISEMENT

ಬಿಜೆಪಿಯಲ್ಲೂ ಭಿನ್ನಮತ ಜೋರಾಗಿದೆ. ಸಚಿವರೇ ಬಹಿರಂಗವಾಗಿ ಇದನ್ನು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್‌ ಪಕ್ಷ ಸಮರ್ಥವಾಗಿ ಹೋರಾಟ ಮಾಡುತ್ತಿಲ್ಲ. ಜನರು ಕೋವಿಡ್‌ನಿಂದ ಸಾಯುತ್ತಿರುವಾಗಲೂ ಬಿಜೆಪಿ ಹಣ ಲೂಟಿ ಮಾಡುತ್ತಿದೆ. ಕಾಂಗ್ರೆಸ್‌ ಮೌನಕ್ಕೆ ಶರಣಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇನ್ನು ಆಟ ಶುರು: ‘ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಲು ಸಜ್ಜಾಗುತ್ತಿದ್ದೇವೆ. ಇನ್ನು ನಮ್ಮ ಆಟ ತೋರಿಸುತ್ತೇವೆ. ವಿಧಾನಮಂಡಲದ ಮುಂದಿನ ಅಧಿವೇಶನದ ವೇಳೆಗೆ ಈ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆ ಎಳೆಯುವೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಜೆಡಿಎಸ್‌ ಕ್ವಾರಂಟೈನ್‌ನಲ್ಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿಕೆ ನೀಡಿದ್ದಾರೆ. ನಿಮ್ಮ (ಬಿಜೆಪಿ) ಸಹವಾಸ ಮಾಡಿದ್ದರಿಂದ ನಮಗೆ ರಾಜಕೀಯ ಕೋವಿಡ್‌ ಅಂಟಿತ್ತು. ಅದನ್ನು ನಿವಾರಿಸಲು ಕ್ವಾರಂಟೈನ್‌ನಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಕಾದು ನೋಡಿ’ ಎಂದರು.

‘ಬಿಜೆಪಿ ಸರ್ಕಾರದಲ್ಲಿ ಇರುವವರು ಕೈಯಲ್ಲಿ ಅಲ್ಲ, ಜೆಸಿಬಿಯಿಂದ ಸರ್ಕಾರದ ಖಜಾನೆ ಲೂಟಿ ಮಾಡುತ್ತಿದ್ದಾರೆ. ಆದರೂ, ಕೆಲವು ಸ್ವಾಮೀಜಿಗಳು ಇವರೇ ಬೇಕು ಅನ್ನುತ್ತಿದ್ದಾರೆ. ಸ್ವಾಮೀಜಿಗಳು ಏಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.