ADVERTISEMENT

ಹೊಸ ವಂಟಮುರಿ ಘಟನೆ | ಸಂತ್ರಸ್ತೆಗೆ ಜಮೀನು ಮಂಜೂರು: ಹೈಕೋರ್ಟ್‌ಗೆ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 16:19 IST
Last Updated 15 ಫೆಬ್ರುವರಿ 2024, 16:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದ ಘಟನೆಗೆ ಸಂಬಂಧಿಸಿದಂತೆ ಥಳಿತಕ್ಕೆ ಒಳಗಾಗಿದ್ದ ಮಹಿಳೆಗೆ ಸರ್ಕಾರ ಜಮೀನು ಮಂಜೂರು ಮಾಡಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಸಂಬಂಧ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಮಾಹಿತಿ ನೀಡಿ, ‘ಪ್ರಕರಣದ ಸಂತ್ರಸ್ತೆಗೆ ಪರಿಹಾರ ಧನದ ಹೊರತಾಗಿ ಎರಡು ಎಕರೆ ಜಮೀನು ಮಂಜೂರು ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಅದರನ್ವಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಯೋಜನೆಯಡಿ ಜಮೀನು ಮಂಜೂರು ಮಾಡಲಾಗಿದೆ. ಈ ಸಂಬಂಧ ಜಮೀನಿನ ಕ್ರಯಪತ್ರವನ್ನು ಸಂತ್ರಸ್ತೆಗೆ ಹಸ್ತಾಂತರಿಸಲಾಗಿದೆ’ ಎಂದು ತಿಳಿಸಿದರು.

ಶೀಘ್ರ ವಿಚಾರಣೆ: ಇದೇ ವೇಳೆ, ‘ಸಂತ್ರಸ್ತೆ ಮೇಲೆ ದೌರ್ಜನ್ಯ ನಡೆಸಿರುವ ಸಂಬಂಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ಪೂರೈಸುವಂತೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು’ ಎಂದೂ ಶಶಿಕಿರಣ ಶೆಟ್ಟಿ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಅಂಶಗಳನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.

ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆದಿದ್ದ ಘಟನೆಯೊಂದರಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಘಾತ ವ್ಯಕ್ತಪಡಿಸಿದ್ದ ಹೈಕೋರ್ಟ್‌, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.