ADVERTISEMENT

ಮಹಾರಾಷ್ಟ್ರ ಸಚಿವ ಪೊಲೀಸರ ವಶಕ್ಕೆ

ವಿರೋಧದ ನಡುವೆಯೂ ಎಂಇಎಸ್‌ನಿಂದ ‘ಹುತಾತ್ಮರ‌’ ದಿನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 19:36 IST
Last Updated 17 ಜನವರಿ 2020, 19:36 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ‘ಹುತಾತ್ಮರ ದಿನ’ ಕಾರ್ಯಕ್ರಮಕ್ಕೆ ಮುನ್ನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ‘ಹುತಾತ್ಮರ ದಿನ’ ಕಾರ್ಯಕ್ರಮಕ್ಕೆ ಮುನ್ನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದರು   

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ವತಿಯಿಂದ ಇಲ್ಲಿ ಶುಕ್ರವಾರ ಆಯೋಜಿಸಿದ್ದ ‘ಹುತಾತ್ಮರ ದಿನ’ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಮಹಾರಾಷ್ಟ್ರದ ಆರೋಗ್ಯ ಸಚಿವ ಶಿವಸೇನೆಯ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇಬಜಾರ್ ಠಾಣೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು, ಅವರ ರಾಜ್ಯಕ್ಕೆ ತಲುಪಿಸಿದ್ದಾರೆ.

ಮಹಾರಾಷ್ಟ್ರದ ಮುಖಂಡರು ಬರುವ ಮುನ್ಸೂಚನೆಯಿಂದಾಗಿ, ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಹುತಾತ್ಮರ ವೃತ್ತ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಮಹಾರಾಷ್ಟ್ರದ ಸಚಿವರು ಟಂಟಂನಲ್ಲಿ ಬಂದಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ವಶಕ್ಕೆ ಪಡೆಯುವಾಗ ಎಂಇಎಸ್ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಹುತಾತ್ಮ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಇಎಸ್‌ನ ಮುಖಂಡರಾದ ಕಿರಣ ಠಾಕೂರ, ದೀಪಕ ದಳವಿ, ಮಾಲೋಜಿರಾವ ಅಷ್ಠೇಕರ ಮೊದಲಾದ ಮುಖಂಡರು ವೇದಿಕೆ ಹಂಚಿಕೊಂಡಿದ್ದರು.

ADVERTISEMENT

ಕಿರಣ ಠಾಕೂರ ಮಾತನಾಡಿ, ‘ಗಡಿ ವಿವಾದದಲ್ಲಿ ಪ್ರಾಣ ತೆತ್ತ 9 ಹುತಾತ್ಮರ ಬಲಿದಾನ ವ್ಯರ್ಥವಾಗಬಾರದು. ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಸರ್ಕಾರವಿದ್ದು, ಎನ್‌ಸಿಪಿಯೂ ಪಾಲುದಾರನಾಗಿದೆ. ಎರಡೂ ಪಕ್ಷಗಳ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ ಮೊದಲಿನಿಂದಲೂ ಗಡಿ ವಿವಾದದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಇನ್ನು ವಿಳಂಬ ಸಲ್ಲದು’ ಎಂದರು.

‘ಗಡಿ ವಿವಾದ ನ್ಯಾಯಾಲಯದಲ್ಲಿದೆ ಎನ್ನುವ ನೆಪ ಹೇಳಿಕೊಂಡು ಇನ್ನೆಷ್ಟು ವರ್ಷಗಳು ಕಾಯುವುದು? ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕಾಯಬೇಕಾದರೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು. ಆಗ ಕರ್ನಾಟಕ ಪೊಲೀಸರ ಆಟ ನಡೆಯುವುದಿಲ್ಲ’ ಎಂದರು.

ಮುಖಂಡ ಮಾಲೋಜಿರಾವ ಅಷ್ಟೇಕರ, ‘ಮಹಾರಾಷ್ಟ್ರದ ನಾಯಕರ ಮೇಲೆ ಒತ್ತಡ ಹಾಕಲು ಎಂಇಎಸ್ ಮುಖಂಡರು ಹೀಗೆಯೇ ಒಗ್ಗಟ್ಟು ಪ್ರದರ್ಶಿಸಬೇಕು’ ಎಂದರು. ಮೆರವಣಿಗೆ ನಡೆಸಿ, ಗಡಿ ಭಾಗದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿದರು.

ಇಲ್ಲಿನ ಕನ್ನಡ ಹೋರಾಟಗಾರರ ವಿರೋಧ ಹಾಗೂ ಪೊಲೀಸ್‌ ಬಂದೋಬಸ್ತ್‌ ನಡುವೆ ಕಾರ್ಯಕ್ರಮ ನಡೆಯಿತು.

ಬೆಳಗಾವಿಗೆ ಹೋಗ್ತೀನಿ: ರಾವುತ್‌

ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ ಅವರನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದನ್ನು ಆ ರಾಜ್ಯದ ರಾಜ್ಯಸಭಾ ಸದಸ್ಯ ಹಾಗೂ ಶಿವಸೇನಾ ವಕ್ತಾರ ಸಂಜಯ ರಾವುತ್‌ ಟೀಕಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ‘ಕರ್ನಾಟಕ ಪೊಲೀಸರು ರಾಜೇಂದ್ರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ತಳ್ಳಾಡಿದ್ದಾರೆ. ಹುತಾತ್ಮರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಅವರನ್ನು ತಡೆಯಲಾಗಿದೆ. ಮಹಾರಾಷ್ಟ್ರ ಬಿಜೆಪಿ ಘಟಕಕ್ಕೆ ಇದನ್ನು ಖಂಡಿಸುವ ಧೈರ್ಯವಿದೆಯೇ? ನಾಳೆ (ಜ.18) ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಗುತ್ತೇನೆ; ಏನಾಗುತ್ತದೆಯೋ ನೋಡೋಣ’ ಎಂದು ಸವಾಲು ಹಾಕಿದ್ದಾರೆ. ಎಂಇಎಸ್ ಮುಖಂಡರು ಆಯೋಜಿಸಿರುವ ಸನ್ಮಾನ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.