ADVERTISEMENT

ಕರ್ನಾಟಕ ರಾಜ್ಯೋತ್ಸವಕ್ಕೆ ಗಡಿ ನಾಡು ಬೆಳಗಾವಿ ಸಜ್ಜು

ಮೆರವಣಿಗೆಯಲ್ಲಿ ಕಂಗೊಳಿಸಲಿವೆ ರೂಪಕ, ಕಲಾವಾಹಿನಿಗಳು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 11:31 IST
Last Updated 31 ಅಕ್ಟೋಬರ್ 2019, 11:31 IST
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಜನರು ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗಿದೆಪ್ರಜಾವಾಣಿ ಚಿತ್ರ
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಜನರು ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಿಸಲಾಗಿದೆಪ್ರಜಾವಾಣಿ ಚಿತ್ರ   

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಗಡಿ ನಾಡು ಬೆಳಗಾವಿ ಸಜ್ಜಾಗಿದೆ.

ಜಿಲ್ಲಾಡಳಿತ, ನಗರಪಾಲಿಕೆ ಹಾಗೂ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಮೆರವಣಿಗೆಗೆ ಸಿಪಿಇಡಿ ಮೈದಾನದಲ್ಲಿ ಚಾಲನೆ ದೊರೆಯಲಿದೆ. ಶುಕ್ರವಾರ (ನ.1) ಬೆಳಿಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರು ತಾಯಿ ಭುವನೇಶ್ವರಿ ಫೋಟೊಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡುವರು. ಕಲಾತಂಡಗಳು, ಕನ್ನಡ ಸಂಘಟನೆಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳು ಸಿದ್ಧಪಡಿಸಿರುವ 90ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಮತ್ತು ಕಲಾವಾಹಿನಿಗಳು ಪಾಲ್ಗೊಂಡು ಮೆರುಗು ನೀಡಲಿವೆ.

ಕ್ಲಬ್ ರಸ್ತೆ, ರಾಣಿ ಚನ್ನಮ್ಮ ವೃತ್ತ, ಕಾಕತಿವೇಸ್‌ ರಸ್ತೆ, ಶನಿವಾರ ಖೂಟ್‌, ಗಣಪತಿ ಗಲ್ಲಿ, ಕಂಬಳಿ ಖೂಟ್, ಮಠ ಗಲ್ಲಿ, ರವಿವಾರ ಪೇಟೆ, ಕರ್ನಾಟಕ ಚೌಕ್‌, ಕಲ್ಮಠ ರಸ್ತೆ, ಮಾರುತಿ ಗಲ್ಲಿ, ಹುತಾತ್ಮ ಚೌಕ್‌, ಕಿರ್ಲೋಸ್ಕರ್‌ ರಸ್ತೆ, ಬೋಗಾರ್‌ವೇಸ್‌, ಕಾಲೇಜು ರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಯಲಿದೆ. ಸಹಸ್ರಾರು ಮಂದಿ ಭಾಗವಹಿಸಲಿದ್ದಾರೆ. ಬೇರೆ ಜಿಲ್ಲೆಗಳಿಂದಲೂ ಕನ್ನಡ ಪ್ರೇಮಿಗಳು ಬರುವುದು ವಿಶೇಷ.

ADVERTISEMENT

ರಾರಾಜಿಸುತ್ತಿರುವ ಕನ್ನಡ ಬಾವುಟಗಳು: ಕನ್ನಡ ಬಾವುಟಗಳು ಹಾರಾಡುತ್ತಿವೆ. ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಶುಭಾಶಯಗಳೊಂದಿಗೆ ಸ್ವಾಗತ ಕಮಾನುಗಳನ್ನು ಜಿಲ್ಲಾಡಳಿತದಿಂದ ಹಾಕಲಾಗಿದೆ. ಹೃದಯ ಭಾಗವಾದ ರಾಣಿ ಚನ್ನಮ್ಮ ವೃತ್ತವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸುತ್ತಲೂ ಸ್ವಾಗತ ಕಮಾನುಗಳನ್ನು ಹಾಕಲಾಗಿದೆ. ಚನ್ನಮ್ಮ ಪ್ರತಿಮಾ ಸ್ಥಳ ಸೇರಿದಂತೆ ಸುತ್ತಲೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, ಇಡೀ ವೃತ್ತ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಶಾಹೂನಗರ ಮೊದಲಾದ ಕಡೆಗಳಲ್ಲಿ ರಸ್ತೆಯುದ್ದಕ್ಕೂ ವಿದ್ಯುತ್‌ ಕಂಬಗಳಿಗೆ ಕನ್ನಡ ಧ್ವಜಗಳನ್ನು ಕಟ್ಟಿದ್ದು ಗಮನಸೆಳೆಯುತ್ತಿದೆ. ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಕನ್ನಡ ಸಾಹಿತ್ಯ ಭವನ ಬಳಿ, ಕಾಕತಿವೇಸ್‌ ಮೊದಲಾದ ಕಡೆಗಳಲ್ಲಿ ಕನ್ನಡ ಧ್ವಜ, ಶಾಲುಗಳು ಹಾಗೂ ಬ್ಯಾಂಡ್‌ಗಳ ಮಾರಾಟ ಜೋರಾಗಿ ನಡೆಯಿತು. ಪ್ಲಾಸ್ಟಿಕ್‌ ನಿಷೇಧಿಸಿರುವುದರಿಂದಾಗಿ, ಬಟ್ಟೆಯಿಂದ ಸಿದ್ಧಪಡಿಸಿದ ತೋರಣಗಳು ಮಾರುಕಟ್ಟೆಗೆ ಬಂದಿವೆ.

ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಇಲ್ಲ: ವಿವಿಧ ಬಡಾವಣೆಗಳಿಂದ ರೂಪಕಗಳೊಂದಿಗೆ ಬರುವ ಕನ್ನಡ ಸಂಘಟನೆಗಳ ಸದಸ್ಯರು ಹಾಗೂ ಸ್ಥಳೀಯರು ಚನ್ನಮ್ಮ ವೃತ್ತದಲ್ಲಿ ಮೆರವಣಿಗೆ ಸೇರಿಕೊಳ್ಳುತ್ತಾರೆ. ಯುವಕ–ಯುವತಿಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ.

ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಉಂಟಾದ ನೆರೆ ಹಾಗೂ ಅತಿವೃಷ್ಟಿಯಿಂದ ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ಸಾವಿರಾರು ಮಂದಿ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಹಾಗೂ ಹೋಳಿಗೆ ಊಟದ ವ್ಯವಸ್ಥೆ ಕೈಬಿಡಲಾಗಿದೆ. ಉಳಿದಂತೆ ರೂಪಕಗಳು, ಕಲಾವಾಹಿನಿಗಳು ಇರುತ್ತವೆ. ಕಾಕತಿವೇಸ್‌ನಲ್ಲಿ ಕನ್ನಡ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಪ್ರತ್ಯೇಕ ಪೆಂಡಾಲ್‌ ಹಾಕಿದ್ದು, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.